ಚಿಕ್ಕಬಳ್ಳಾಪುರ: ಮಹಿಳೆಯರು ದುಡಿಮೆ ಮಾಡುತ್ತ ಗಮನ ಹರಿಸಿ, ಉದ್ಯಮಶೀಲತಾ ಕೌಶಲ್ಯತೆಯನ್ನು ಬೆಳೆಸಿಕೊಂಡು ಆರ್ಥಿಕವಾಗಿ ಸಬಲರಾದಲ್ಲಿ ಸಮಾಜ ಮತ್ತು ದೇಶದ ಪ್ರಗತಿಗೆ ಸಹಕಾರಿಯಾಗುವುದೆಂದು ನಗರ ಮಹಿಳಾ ಪೊಲಿಸ್ ಠಾಣೆಯ ಇನ್ಸ್ಪೆಕ್ಟರ್ ನಿರ್ಮಲ, ಮಹಿಳೆಯರಿಗೆ ಕರೆ ನೀಡಿದರು.
ನಗರದ ಪೋಲಿಸ್ ಸಮುದಾಯಭವನದಲ್ಲಿ ಬಜ್ ಇಂಡಿಯಾ ಸೇವಾಸಂಸ್ಥೆಯಿಂದ ಏರ್ಪಡಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ,ವಿಶ್ವಸಂಸ್ಥೆಯು 2024ರ ಅಂತರಾಷ್ಟ್ರೀಯ ಮಹಿಳಾ ದಿನದ ಧ್ಯೇಯವಾಕ್ಯ ಮಹಿಳೆಯರಲ್ಲಿ ಹೂಡಿಕೆ ಮಾಡಿ ಪ್ರಗತಿಯನ್ನು ವೇಗಗೊಳಿಸಿ ಎಂದು ಗೊತ್ತುಪಡಿಸಿದೆ. ಧ್ಯೇಯವಾಕ್ಯವು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ವೈವಿಧ್ಯತೆ ಮತ್ತು ಸಬಲೀಕರಣದ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಈ ಅಭಿಯಾನದ ಮೂಲಕ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವೈವಿಧ್ಯತೆ ಮತ್ತು ಸಬಲೀಕರಣದ ಪ್ರಾಮುಖ್ಯತೆಯನ್ನು ಗುರುತಿಸಲು ಮತ್ತು ಲಿಂಗ ಸಮಾನತೆಯನ್ನು ಮುನ್ನಡೆಸುವಲ್ಲಿ ಸೇರ್ಪಡೆಯ ಪ್ರಮುಖ ಪಾತ್ರವನ್ನು ಒತ್ತಿಹೇಳಲು ಬಲವಾದ ಒತ್ತು ನೀಡಲಾಗಿದೆ ಎಂದು ಹೇಳಿದರು.
ಟಿಎಚ್ಒ ಡಾ.ಮಂಜುಳ ಮಾತನಾಡಿ, ಅಂತರಾಷ್ಟ್ರೀಯ ಮಹಿಳಾ ದಿನದ ಮಹತ್ವವು ಲಿಂಗ ಸಮಾನತೆ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ನಿಂದನೆಯಂತಹ ವಿಷಯಗಳ ಬಗ್ಗೆ ಗಮನ ಸೆಳೆಯಲಿದೆ. ಇದು ಮಹಿಳಾ ಹಕ್ಕುಗಳು ಮತ್ತು ಸಬಲೀಕರಣಕ್ಕಾಗಿ ಪ್ರತಿಪಾದಿಸುವಲ್ಲಿ ಸಾಮೂಹಿಕವಾದ ಕ್ರಿಯೆ ಮತ್ತು ಸಹಯೋಗಕ್ಕೆ ವೇದಿಕೆ ಒದಗಿಸುತ್ತದೆ ಎಂದರು.
ಬಜ್ ಇಂಡಿಯಾ ಸಂಸ್ಥೆಯ ಸಿಇಒ ಉತ್ತರಾ ನಾರಾಯಣನ್ ಮಾತನಾಡಿ, ಸಂಸ್ಥೆಯು ಮಹಿಳೆಯರಲ್ಲಿ ಉಳಿತಾಯ ಮತ್ತು ಉದ್ಯಮಶೀಲತೆ ಮೂಡಿಸುತ್ತಿದೆ. ಗ್ರಾಮೀಣ ಮಹಿಳೆಯರ ಶಕ್ತಿಯನ್ನು ಸಶಕ್ತಗೊಳಿಸಲು, ಉದ್ಯೋಗಾವಕಾಶ ಕಲ್ಪಿಸಲು ಹಾಗೂ ಉದ್ಯಮಗಳ ವಿನಿಮಯ ಮಾಡಿಕೊಳ್ಳಲು ಬಜ್ ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಹಾಯಕ ನಿರ್ದೇಶಕ ಗಂಗಾಧರ್, ಬಜ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕರಾದ ಸುರೇಶ್, ರಾಜೇಶ್, ಮಲ್ಲಿಖಾರ್ಜುನ್ಮತ್ತು ಇತರರು ಇದ್ದರು.