ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯಲು ಕಾರಾಗೃಹ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರ ಸೂಚನೆಯಂತೆ ರಾಜ್ಯದ ಎಲ್ಲಾ ಜೈಲುಗಳಲ್ಲಿ ಕೈದಿಗಳನ್ನು ಮಾದಕ ವಸ್ತು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಪರಪ್ಪನ ಅಗ್ರಹಾರದಲ್ಲಿ ಮಾರ್ಚ್ ೯ ರಂದು ಸಿಬ್ಬಂದಿಯೇ ತನ್ನ ಒಳುಡುಪಿನಲ್ಲಿ ಮಾದಕ ವಸ್ತುಗಳನ್ನು ಜೈಲಿನೊಳಗೆ ತಂದ ಘಟನೆ ನಡೆದಿತ್ತು. ಇದೊಂದೇ ಅಲ್ಲದೆ ಹಲವು ಬಾರಿ ರಾಜ್ಯದ ಜೈಲುಗಳಲ್ಲಿ ಈ ರೀತಿಯ ಅಕ್ರಮಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆ ನಿಮ್ಹಾನ್ಸ್ ಆಸ್ಪತ್ರೆಯ ಸಹಯೋಗದೊಂದಿಗೆ ಡ್ರಗ್ಸ್ ಮುಕ್ತ ಕಾರಾಗೃಹ ನಿರ್ಮಾಣ ಮಾಡುವ ಗುರಿಯಿಂದ ಕೈದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಈ ಯೋಜನೆಯಡಿ ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ಗಾಂಜಾ, ಹೆರೊಯಿನ್, ಕೊಕೈನ್ ಸೇರಿದಂತೆ ವಿವಿಧ ಮಾದಕ ವಸ್ತುಗಳ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸದ್ಯ ಮೊದಲ ಹಂತದಲ್ಲಿ ಎಲ್ಲಾ ಜೈಲುಗಳಲ್ಲಿ ಸುಮಾರು ಶೇ೧೦ರಷ್ಟು ಕೈದಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಕಾರಾಗೃಹ ಇಲಾಖೆ ನೀಡಿರುವ ವಿಶೇಷ ಕಿಟ್ಗಳ ಮೂಲಕ ಜೈಲು ವೈದ್ಯಾಧಿಕಾರಿಗಳು ಈ ಪರೀಕ್ಷೆಗಳನ್ನು ಮಾಡುತ್ತಿದ್ದಾರೆ.



