ಬೆಂಗಳೂರು: ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸುವಸಂಬಂಧ ಇಂದು ನಡೆದಿರುವ ಸಂಪುಟ ಸಭೆಯಲ್ಲಿ ಮಹತ್ವದ ಸಮಾಲೋಚನೆ ನಡೆದಿದೆ.
ಇಂದು ಬೆಳಿಗ್ಗೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಂಪುಟ ಸಭೆಯಲ್ಲಿ ದಲಿತ ಸಮುದಾಯದ ಹಲವು ಮುಖಂಡರು, ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರೊಂದಿಗೆ ಪ್ರಮುಖವಾಗಿ ಚರ್ಚೆ ನಡೆಸಿದ್ದಾರೆ. ಮಹಾದೇವಪ್ಪ ನಿವಾಸದಲ್ಲಿ ಉಪಹಾರ ಕೂಟ ನಡೆಸಿದ ಪ್ರಮುಖರು ಒಳಮೀಸಲಾತಿಗೆ ಸಂಬಂಧಪಟ್ಟಂತೆ ಸಮಾಲೋಚನೆ ನಡೆಸಿದ್ದು, ಸಭೆಯಲ್ಲಿ ನಡೆದಿರುವ ಚರ್ಚೆ ಬಾರಿ ಮಹತ್ವ ಪಡೆದುಕೊಂಡಿದೆ.
ಸಭೆಯಲ್ಲಿ ಸಚಿವ ಮಹಾದೇವಪ್ಪ ಸೇರಿದಂತೆ ಮತ್ತೋರ್ವ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಎಂ.ಚಂದ್ರಪ್ಪ, ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ವಿಧಾನಪರಿಷತ್ ಸದಸ್ಯರಾದ ಸುಧಾಮದಾಸ್ ಡಾ. ತಿಮ್ಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಒಳಮೀಸಲಾತಿ ನಿರ್ಣಯಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಚಿತ್ರದುರ್ಗದಲ್ಲಿ ನಡೆದ ಸಮಾವೇಶದಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಈ ಹಿಂದೆಬೊಮ್ಮಾಯಿ ಸರ್ಕಾರದಲ್ಲಿ ನ್ಯಾಯಮೂರ್ತಿ ಎಜೆ. ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಲಾಗಿತ್ತು. ಒಳಮೀಸಲಾತಿ ನೀಡುವುದು ಕಾನೂನು ಬದ್ಧವಾಗಿದೆ. ಹಾಗಾಗಿ ಈ ಬಗ್ಗೆ ಇಂದಿನ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಬಹುದು ಎಂದಿದ್ದಾರೆ.
ಇಂದಿನ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಬಗ್ಗೆ ಚರ್ಚೆ ನಡೆದು ಕೈಗೊಳ್ಳುವ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬಹುದು ಎಂದುತಿಳಿದುಬಂದಿದೆ.ಸಂವಿಧಾನದ 341ನೇ ವಿಧಿಗೆ ಮೂರನೇ ಖಂಡವನ್ನು ಸೇರಿಸುವ ಮೂಲಕ ಪರಿಶಿಷ್ಟರಲ್ಲಿ ಒಳಮೀಸಲಾತಿ ಅನುಷ್ಠಾನಕ್ಕೆ ತರುವಂತೆ ಶಿಪಾರಸ್ಸು ಮಾಡುವ ಪ್ರಸ್ತಾಪವನ್ನು ಸಮಾಜ ಕಲ್ಯಾಣ ಇಲಾಖೆ ಸಿದ್ಧ ಪಡಿಸಿದೆ ಎಂದು ತಿಳಿದುಬಂದಿದೆ.
ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಯಾವುದೇ ಅಧಿಕಾರವಿಲ್ಲ. ಕೇಂದ್ರ ಸರ್ಕಾರವು ಸಂವಿಧಾನದ 341ವಿಧಿಗೆ ಹೊಸದಾಗಿ ಖಂಡ 3ಅನ್ನು ಸೇರಿಸಿದರೆ ಮಾತ್ರ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಲು ಅವಕಾಶವಿದೆ.