ಗಣಿಗಳು ಯಾವುದೇ ದೇಶದ ಪ್ರಾಕೃತಿಕ ಸಂಪನ್ಮೂಲಗಳ ಆಗರವಾಗಿರುತ್ತವೆ. ಲೋಹಗಳು, ಖನಿಜಗಳು ಮೊದಲಾದ ದಿನ ನಿತ್ಯದ ಬಳಕೆಯ ಸಾಮಗ್ರಿಗಳನ್ನು ಭೂಮಿ ತನ್ನೊಡಲೊಳಗೆ ಅವಿತಿಟ್ಟುಕೊಂಡಿರುತ್ತದೆ. ಇವೆಲ್ಲವೂ ರಾಷ್ಟ್ರೀಯ ಸಂಪತ್ತುಗಳು.
ಕಚ್ಚಾ ರೂಪದಲ್ಲಿ ಭೂಮಿಯಲ್ಲಿ ಸಿಗುವ ಈ ಲೋಹ, ಖನಿಜ ಅಥವಾ ಭೂಗರ್ಭದಲ್ಲಿ ಸಿಗುವ ಯಾವುದೇ ಪದಾರ್ಥವನ್ನು ಅಗೆದು ತೆಗೆದು ಅದನ್ನು ಉಪಯೋಗಿಸುವ ರೂಪಕ್ಕೆ ತರುವುದೇ ಗಣಿಗಾರಿಕೆಯ ಪ್ರಮುಖ ಕೆಲಸವಾಗಿದೆ. ಅನೇಕ ಉದ್ಯಮಗಳಿಗೆ ಅವಶ್ಯವಾದ ಪದಾರ್ಥ ಒದಗಿಸುವ ಗಣಿಗಾರಿಕೆ ಬಹು ದೊಡ್ಡ ಆರ್ಥಿಕ ಸಂಪತ್ತಾಗಿದ್ದು ದೇಶದ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆಯನ್ನು ನೀಡುತ್ತದೆ.
ಈ ಗಣಿಗಾರಿಕೆಯ ಕೆಲಸದಲ್ಲಿ ಬಹಳಷ್ಟು ಅಪಾಯಗಳು, ಸಮಸ್ಯೆಗಳು ಇರುತ್ತವೆ. ಭೂಮಿಯ ಒಳಭಾಗದಿಂದ ಖನಿಜ ಲೋಹ ಅಥವಾ ಭೂಗರ್ಭದಲ್ಲಿ ಅವಿತಿರುವ ಸಂಪತ್ತನ್ನು ಕೇವಲ ಕೈಯಿಂದ ಅಗಿದು ತೆಗೆಯಲು ಸಾಧ್ಯವಿರದ ಕಾರಣ ಯಂತ್ರೋಪಕರಣಗಳು ಕೆಲವೊಮ್ಮೆ ಸ್ಫೋಟಕಗಳನ್ನು ಬಳಸಿಯೂ ತೆಗೆಯಲಾಗುತ್ತದೆ.
ಹೀಗಾಗಿ ಗಣಿಗಳಲ್ಲಿ ಕೆಲಸ ಮಾಡುವವರಿಗೆ ಮತ್ತು ಗಣಿಗಾರಿಕೆಗೆ ಸಂಬಂಧಿಸಿದ ವ್ಯಕ್ತಿಗಳಿಗೆ ಗಣಿಗಾರಿಕೆಯ ಅಪಾಯಗಳು ಮತ್ತು ಅಪಾಯಕ್ಕೆ ಸಿಲುಕದಂತೆ ನೋಡಿ ಕೊಳ್ಳುವುದರ ಜೊತೆಗೆ ಅಪಾಯಕ್ಕೆ ಒಳಗಾದವರ ರಕ್ಷಣೆಯ ಕ್ರಮಗಳ ತರಬೇತಿಯನ್ನು ಕೊಡಿಸುವುದು ಮಹತ್ವ ಪಡೆಯುತ್ತದೆ. ಈ ಉದ್ಯಮದಲ್ಲಿ ಕೆಲಸ ಮಾಡುವವರಿಗೆಲ್ಲರಿಗೂ ತಿಳಿಸಿ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿ ಕಲಿಸುವುದು ಅತೀ ಅವಶ್ಯವಾಗಿದೆ. ಹೀಗಾಗಿ ಈ ದಿನವು ಜೀವರಕ್ಷಣೆ ಮತ್ತು ಯಂತ್ರೋಪಕರಣಗಳು ಹಾಗೂ ತಂತ್ರಜ್ಞಾನದ ಸರಿಯಾದ ಉಪಯೋಗವನ್ನು ಮಾಡಿಕೊಳ್ಳುವುದರ ಬಗೆಗೆ ಜನರಲ್ಲಿ ತಿಳುವಳಿಕೆ ಮೂಡಿಸುವ ಕೆಲಸವಾಗಿದೆ.
2005ನೇ ಇಸವಿಯ ಡಿಸೆಂಬರ್ 8ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಏಪ್ರಿಲ್ 4ನೇ ತಾರೀಖಿನಂದು ಅಂತಾರಾಷ್ಟ್ರೀಯ ಗಣಿಗಾರಿಕಾ ತಿಳುವಳಿಕೆಯ ದಿನ ಮತ್ತು ಗಣಿಗಾರಿಕೆಯ ಸಹಾಯಕ ದಿನವನ್ನು ಆಚರಿಸಬೇಕೆಂಬ ಘೋಷಣೆ ಮಾಡಲಾಯಿತು. 2006ರ ಏಪ್ರಿಲ್ 6ರಿಂದ ಈ ದಿನದ ಆಚರಣೆ ನಡೆಸಲಾಗುತ್ತಿದೆ. 2024ರ ಘೋಷವಾಕ್ಯ ” ಜೀವಗಳನ್ನು ಸಂರಕ್ಷಿಸಿ, ಶಾಂತಿಯನ್ನು ಕಟ್ಟಬಹುದು” ಎಂಬುದಾಗಿದೆ.
ಇಂತಹ ಗಣಿಗಾರಿಕೆ ವಿಶ್ವದಾದ್ಯಂತ ಹೆಚ್ಚಾಗಿದ್ದು, ಜೀವಗಳ ರಕ್ಷಣೆ ಸರ್ವ ಪ್ರಥಮ ಆದ್ಯತೆಯಾಗಬೇಕೆಂಬುದು ವಿಶ್ವ ಸಂಸ್ಥೆಯ ಗಣಿಗಾರಿಕಾ ಕಾರ್ಯನಿರತ ಸೇವೆಗಳ ಘಟಕದ ಗುರಿಯಾಗಿದ್ದು. ವಿಶ್ವದಾದ್ಯಂತ ಯಾವುದೇ ದೇಶದಲ್ಲಿ ಆಗಿರಲಿ ಗಣಿಗಾರಿಕೆ ಮಾಡುವಾಗ ಅಪಾಯಕ್ಕೆ ಸಿಲುಕಿ ಯಾವುದೇ ಜೀವವು ಹೋಗಬಾರದು, ಅಪಘಾತಗಳಿಂದ ಅಂಗವೈಕಲ್ಯ ಅಥವಾ ಬೇರೆ ಯಾವುದೇ ಸಮಸ್ಯೆ ಬರಬಾರದೆಂಬುದೇ ಉದ್ದೇಶವಾಗಿದೆ.
— ಮಾಧುರಿ ದೇಶಪಾಂಡೆ, ಬೆಂಗಳೂರು