ದೇವನಹಳ್ಳಿ: ಜಿಲ್ಲಾ ಕಾರ್ಮಿಕ ಇಲಾಖೆಯ ವತಿಯಿಂದ ಅಸಂಘಟಿತ ವಲಯದ ವ್ಯಾಪ್ತಿಯಲ್ಲಿ ಬರುವ ದಿನಪತ್ರಿಕೆ ವಿತರಿಸುವ ಕಾರ್ಮಿಕರು ಅರೆಕಾಲಿಕ ವೃತ್ತಿ ನಿರ್ವಹಿಸುತ್ತಿದ್ದು, ಪ್ರತಿನಿತ್ಯ ಸಾರ್ವಜನಿಕರ ಮನೆ ಬಾಗಿಲಿಗೆ ಪ್ರತಿಕೆಗಳನ್ನು ವಿತರಿಸುತ್ತಾರೆ. ಈ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ ಜಾರಿಗೆ ತರಲಾಗಿದೆ.
ದಿನಪತ್ರಿಕೆ ವಿತರಕ ಕಾರ್ಮಿಕರಲ್ಲಿ ಬಹುತೇಕರು ದಿನಪತ್ರಿಕೆ ವಿತರಿಸಲು ದ್ವಿಚಕ್ರ ವಾಹನ ಬಳಸುತ್ತಿದ್ದು. ಅಪಘಾತಕ್ಕೊಳಗಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವಿತರಿಸುವ ಮೂಲಕ ಸಾಮಾಜಿಕ ಭದ್ರತೆ ಒದಗಿಸುವುದು ಯೋಜನೆಯ ಉದ್ದೇಶವಾಗಿರುತ್ತದೆ.
ದೊರಕುವ ಸೌಲಭ್ಯಗಳು: ಅಪಘಾತದಿಂದ ಮರಣಹೊಂದಿದಲ್ಲಿ ರೂ. 02ಲಕ್ಷ, ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ 02 ಲಕ್ಷಗಳವರೆಗೆ ಹಾಗೂ ಅಪಘಾತ ಅಥವಾ ಮಾರಣಾಂತಿಕ ಕಾಯಿಲೆ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚ ಮರುಪಾವತಿ ರೂ 01 ಲಕ್ಷದವರೆಗೆ ಸೌಲಭ್ಯವಿರುತ್ತದೆ. ಎಲ್ಲಾ ಪತ್ರಿಕಾ ವಿತರಕರು ಇ-ಶ್ರಮ್ ಪೋರ್ಟಲ್ www.eshram.gov.in ರಲ್ಲಿ ಸ್ವಯಂ ಆಗಿ ಅಥವಾ ಹತ್ತಿರದ ಸೇವಾ ಕೇಂದ್ರಗಳಲ್ಲಿ news Paper boy ಎಂದು ನೋಂದಾಯಿಸಿಕೊಳ್ಳುವ ಮೂಲಕ ಯೋಜನೆಯ ಪ್ರಯೋಜನೆ ಪಡೆಯಬಹುದಾಗಿದೆ.
ಮೇಲ್ಕಂಡ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳು, ಯೋಜನೆಯಡಿನಿಗದಿ ಪಡಿಸಿದ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿಸೌಲಭ್ಯ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯ ವಾಣಿ 155214, ಕಾರ್ಮಿಕ ಅಧಿಕಾರಿಗಳ ಕಛೇರಿ ಬೆಂಗಳೂರು ಗ್ರಾಮಾಂತರ ಉಪ ವಿಭಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೋಮೇಶ್ವರ ಬಡಾವಣೆ, ದೊಡ್ಡಬಳ್ಳಾಪುರ ಅಥವಾ ಕಾರ್ಮಿಕ ನಿರೀಕ್ಷಕರು, ದೊಡ್ಡಬಳ್ಳಾಪುರ, ದೇವನಹಳ್ಳಿ,ಹೊಸಕೋಟೆ, ನೆಲಮಂಗಲ ಇವರ ಕಛೇರಿಗಳನ್ನು ಸಂಪರ್ಕಿಸಬಹುದು ಎಂದು ಬೆಂ.ಗ್ರಾಮಾಂತರ ಜಿಲ್ಲೆಯ ಉಪ ವಿಭಾಗದ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.