ಮೈಸೂರು: ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಪಾಲ್ಗೊಂಡಿದ್ದ ಕೇಂದ್ರ ಸರ್ಕಾರದ ಕಾರ್ಯಕ್ರಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ತಮ್ಮನ್ನು ಆಹ್ವಾನಿ ಸದೆ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಕೇಂದ್ರ ಸರ್ಕಾರದ ಸರ್ವಾಧಿಕಾರ ಧೋರಣೆ ವಿರುದ್ಧ ರಾಷ್ಟ್ರಪತಿ ದೌಪದಿಮುರ್ಮು ಅವರಿಗೆ ಪತ್ರ ಬರೆಯುವುದಾಗಿ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಇಂದು ಪತ್ರಕರ್ತರ ಜೊತೆ ಮಾತನಾಡಿದ ಅವರು, ಈ ರೀತಿಯ ಸರ್ವಾಧಿಕಾರ ಧೋರಣೆ ಅನುಸರಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗಣತಂತ್ರ ವ್ಯವಸ್ಥೆಯ ಕತ್ತು ಹಿಸುಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಷ್ಟಾಚಾರ ಪಾಲನೆ ಮಾಡಬೇಕು. ಎಲ್ಲಾ ರೀತಿಯ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲನ್ನು ನೀಡುತ್ತದೆ. ಆದರೆ ರಾಜ್ಯಪಾಲರು ಭಾಗವಹಿಸಿದ್ದ ಮೈಸೂರು ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ತಮ್ಮನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಗಣತಂತ್ರ ವ್ಯವಸ್ಥೆ ಬಲಪಡಿಸುವುದರ ಬದಲು ಅದನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಡಾ.ಮಹದೇವಪ್ಪ ಆರೋಪಿಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ಪ್ರತಿಯೊಂದು ಜಿಲ್ಲೆಗೆ ಐಎಎಸ್ ಅಧಿಕಾರಿಗಳನ್ನು ನಿಯೋಜಿಸುತ್ತಿದ್ದಾರೆ. ಜನರ ಬೆಂಬಲ ಸಿಗುತ್ತಿಲ್ಲ ಎಂದು ಮನವರಿಕೆ ಆದ ಮೇಲೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರಚಾರ ಮಾಡುವ ತಂತ್ರಗಾರಿಕೆ ರೂಪಿಸಿದ್ದಾರೆ. ಇದರ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಐಎಎಸ್ ಸೇರಿದಂತೆ ಇತರೆ ಅಧಿಕಾರಿಗಳನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಯುಪಿಎಸ್ಸಿಯಿಂದ ಆಯ್ಕೆಯಾಗುವ ಐಎಎಸ್ ಸೇರಿದಂತೆ ಇತರೆ ಅಧಿಕಾರಿಗಳು ನೇರವಾಗಿ ರಾಷ್ಟ್ರಪತಿಗಳ ವ್ಯಾಪ್ತಿಗೆ ಒಳಪಡುತ್ತಾರೆ. ಆದ ಕಾರಣ ರಾಷ್ಟ್ರಪತಿಗಳ ಮಧ್ಯ ಪ್ರವೇಶ ಮಾಡಿ ಅವ್ಯವಸ್ಥೆ ಸರಿಪಡಿಸುವಂತೆ ಪತ್ರ ಬರೆಯುತ್ತಿದ್ದೇನೆ ಎಂದರು.ಕರ್ನಾಟಕ ಮಾತ್ರವಲ್ಲದೆ ಬಿಜೆಪಿಯೇತರ ಸರ್ಕಾರ ಅಧಿಕಾರದಲ್ಲಿರುವ ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಇತರೆ ರಾಜ್ಯಗಳಲ್ಲಿ ಕೂಡ ಇದೇ ಪರಿಸ್ಥಿತಿ ಇದೆ. ಈ ಮೂಲಕ ಕೇಂದ್ರ ಸರ್ಕಾರ ಅಧಿಕಾರಿಗಳನ್ನು ರಾಜಕೀಯ ಗಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ಆಪಾದಿಸಿದರು. ಬಹಳಷ್ಟು ಪ್ರಾಮಾಣಿಕ, ಸಾಮಾಜಿಕ ಕಳಕಳಿ ಇರುವ ಅಧಿಕಾರಿಗಳಿದ್ದಾರೆ.
ಸರ್ಕಾರದ ವ್ಯವಸ್ಥೆಯಲ್ಲಿ ಇವರು ಮಾತನಾಡಲು ಸಾಧ್ಯವಾಗದಿದ್ದರೆ, ನಿವೃತ್ತಿ ಹೊಂದಿರುವ ಅಧಿಕಾರಿಗಳಾದರೂ ದನಿ ಎತ್ತಬೇಕು ಎಂದು ಸಲಹೆ ನೀಡಿದರು. ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಲ್ಲಿ ಅಲ್ಲಿನ ಆಡಳಿತರೂಢ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ಅಧಿ ಕಾರಿಗಳನ್ನು ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಆದರೆ ಕಾಂಗ್ರೆಸ್ ಸಂಸ್ಕೃತಿ ಇರುವ ಪಕ್ಷವಾದ ಕಾರಣ ನಮ್ಮ ಕಾರ್ಯಕರ್ತರು ಆ ಮಟ್ಟಕ್ಕೆ ಹೋಗುವುದಿಲ್ಲ. ಹಾಗೆಂದ ಮಾತ್ರಕ್ಕೆ ಇದು ನಮ್ಮ ದೌರ್ಬಲ್ಯ ಎಂದು ಭಾವಿಸಬಾರದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ವಿಜಯ ಕುಮಾರ್. ಮಾಜಿ ಪಾಲಿಕೆ ಸದಸ್ಯ ಶಿವಣ್ಣ ಇನ್ನಿತರರು ಉಪಸ್ಥಿತರಿದ್ದರು.