ನವದೆಹಲಿ: ವೇಗದ ದಾಳಿಯ ಮುಂಚೂಣಿಯಲ್ಲಿರುವ ಮೊಹಮ್ಮದ್ ಸಿರಾಜ್ ಅವರಿಗೆ ಬೆಂಬಲವಾಗಿ ಹೆಚ್ಚಿನ ಬೌಲಿಂಗ್ ಆಯ್ಕೆ ಪಡೆಯುವುದಕ್ಕೆ ರಾಯಲ್ ಚಾಲೆಂಜರ್ ಬೆಂಗಳೂರು (ಆರ್ಸಿಬಿ) ತಂಡ ಮಂಗಳವಾರ ನಡೆಯುವ ಹರಾಜಿನ ವೇಳೆ ಆದ್ಯತೆ ನೀಡಲಿದೆ ಎಂದು ತಂಡದ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಸೋಮವಾರ ಇಲ್ಲಿ ತಿಳಿಸಿದರು.
ಆರ್ಸಿಬಿ ತಂಡವು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ನಾಯಕ ಫಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಸಿರಾಜ್ ಒಳಗೊಂಡಂತೆ 18 ಆಟಗಾರರನ್ನು ಉಳಿಸಿಕೊಂಡಿದೆ. 11 ಆಟಗಾರರನ್ನು ತಂಡದಿಂದ ‘ಬಿಡುಗಡೆ’ ಮಾಡಿದೆ. ಮಧ್ಯಮ ವೇಗದ ಬೌಲರ್ ಹರ್ಷಲ್ ಪಟೇಲ್, ಶ್ರೀಲಂಕಾದ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಮತ್ತು ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್ವುಡ್ ಅವರನ್ನು ಬಿಟ್ಟಿರುವುದರಿಂದ ಬೌಲಿಂಗ್ ವಿಭಾಗ ಬಡವಾಗಿದೆ.
‘ಸಿರಾಜ್ ನಮ್ಮ ಕಾರ್ಯತಂತ್ರದ ಪ್ರಮುಖ ಭಾಗವಾಗಿದ್ದಾರೆ. ತಂಡದ ಮುನ್ನಡೆಗೆ ಅವರಿಗೆ ಬೆಂಬಲವಾಗಿ, ಹೊರದೇಶದ ವೇಗದ ಬೌಲರ್ ಸೇರಿದಂತೆ ಹೆಚ್ಚಿನ ಬೌಲರ್ಗಳ ಆಯ್ಕೆ ನಮ್ಮ ನೈಜ ಆದ್ಯತೆಯಾಗಲಿದೆ’ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಬೊಬಾಟ್ ಹೇಳಿದ್ದಾರೆ.