ಮುಂಬೈ: ಐಪಿಎಲ್ 2025 ಹರಾಜು ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇಂಗ್ಲೆಂಡ್ ನ ಸ್ಟಾರ್ ಆಟಗಾರರಾದ ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ಮೇಲೆ ನಿಷೇಧದ ತೂಗುಗತ್ತಿ ತೂಗುತ್ತಿದೆ.
ಹೌದು.. 2025ರ ಐಪಿಎಲ್ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದ್ದು, ಇದೇ ತಿಂಗಳ ಅಂದರೆ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ.
ಈ ಬಾರಿ ಮೆಗಾ ಹರಾಜಿಗೆ 1165 ಭಾರತೀಯ ಆಟಗಾರರು ಸೇರಿದಂತೆ ಒಟ್ಟು 1574 ಕ್ರಿಕೆಟಿಗರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 320 ಕ್ಯಾಪ್ಡ್ ಮತ್ತು 1224 ಅನ್ಕ್ಯಾಪ್ಡ್ ಆಟಗಾರರಿದ್ದಾರೆ. ಉಳಿದಂತೆ ಸಹವರ್ತಿ ದೇಶಗಳ 30 ಆಟಗಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.
ಆದರೆ ಈ ಬಾರಿ ಹರಾಜಿಗೆ ನೋಂದಾಯಿಸಿಕೊಂಡ ಆಟಗಾರರ ಪಟ್ಟಿಯಲ್ಲಿ ಬೆನ್ ಸ್ಟೋಕ್ಸ್ ಮತ್ತು ಜೋ ರೂಟ್ ಹೆಸರಿಲ್ಲ. ಆ್ಯಶಸ್ ಸರಣಿ ಮೇಲೆ ಕಣ್ಣಿಟ್ಟಿರುವ ಈ ಇಬ್ಬರು ಆಟಗಾರರು ಐಪಿಎಲ್ ಹರಾಜು ಪ್ರಕ್ರಿಯೆಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಆದರೆ ಅವರ ಇದೇ ನಿರ್ಧಾರ ಇದೀಗ ಅವರನ್ನು 2 ವರ್ಷಗಳ ಕಾಲ ಐಪಿಎಲ್ ನಿಂದ ದೂರವಿಡುವ ಆಪಾಯ ತಂದಿದೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗವಹಿಸದ ಆಟಗಾರರು ಎರಡು ವರ್ಷಗಳ ಕಾಲ ಐಪಿಎಲ್ ಆಡಲು ಅವಕಾಶವಿಲ್ಲ. ಬಿಸಿಸಿಐನ ಹೊಸ ನಿಯಮದ ಪ್ರಕಾರ, ಮೆಗಾ ಹರಾಜಿನಲ್ಲಿ ನೋಂದಾಯಿಸದ ವಿದೇಶಿ ಆಟಗಾರರು ಮುಂದಿನ ವರ್ಷದ ಹರಾಜಿನಲ್ಲೂ ಭಾಗವಹಿಸಲು ಅರ್ಹರಲ್ಲ.