ನ್ಯೂಯಾರ್ಕ್: ಒಂಬತ್ತನೇ ಆವೃತ್ತಿಯ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಕ್ಷಣಗಣನೆ ಮೊದ ಲ್ಗೊಂಡಿದೆ. ಇಂದು(ಶನಿವಾರ) ನಡೆಯುವ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ನೆರೆಯ ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ನ್ಯೂಯಾರ್ಕ್ನಲ್ಲಿ ನಡೆಯಲಿದೆ.
ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್ ಆಡುತ್ತಿರುವ ಕಾರಣ ಟೀಮ್ ಇಂಡಿಯಾಕ್ಕೆ ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳವ ಸವಾಲು ದೊಡ್ಡ ಮಟ್ಟದಲ್ಲಿರಲಿದೆ. ಈಗಾಗಲೇ ನಾಯಕ ರೋಹಿತ್ ಶರ್ಮ ಕೂಡ ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಭಾರತದ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಸಾರವಾದರೂ ಕೂಡ ಈ ಪಂದ್ಯ ಅಮೆರಿಕದಲ್ಲಿ ಹಗಲು ಪಂದ್ಯವಾಗಿರಲಿದೆ.
ಐಪಿಎಲ್ ಆಡಿದ ಜೋಶ್ನಲ್ಲಿರುವ ಭಾರತೀಯ ಆಟಗಾರರು ಈ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆ ಇದೆ. ಈ ಬಾರಿಯ ಐಪಿಎಲ್ ಕೂಟದ ಗರಿಷ್ಠ ರನ್ ಸರದಾರ ವಿರಾಟ್ ಕೊಹ್ಲಿ ಅವರು ಅಭ್ಯಾಸ ಪಂದ್ಯ ಆಡುವುದು ಅನುಮಾನ ಎನ್ನಲಾಗಿದೆ. ಏಕೆಂದರೆ ಅವರು ನಿನ್ನೆಯಷ್ಟೇ ನ್ಯೂಯಾರ್ಕ್ ತಲುಪಿದ್ದಾರೆ. ಹೀಗಾಗಿ ಅವರು ಆಡುವ ಬಗ್ಗೆ ಯಾವುದೇ ಖಚಿತತೆ ಇಲ್ಲ.
ಬಾಂಗ್ಲಾದೇಶ ಈಗಾಗಲೇ ಅಮೆರಿಕ ವಿರುದ್ಧ ಆಡಿದ ಮೊದಲ ಅಭ್ಯಾಸ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ತಂಡದ ಮೇಲೆ ಹೆಚ್ಚಿನ ಭರವಸೆ ಇರಿಸುವುದು ಕಷ್ಟ. ಅನುಭವಿ ಆಟಗಾರರ ಪಡೆಯೇ ಹೊಂದಿದ್ದರೂ, ಯಾರು ಕೂಡ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ.ಇಂದು ನಡೆಯುವ ಉದ್ಘಾಟನ ಲೀಗ್ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ಕೆನಡಾ ಸೆಣಸಾಡಲಿದೆ. ಅಮೆರಿಕದಲ್ಲಿ ಈ ಪಂದ್ಯ ಶನಿವಾರ ನಡೆದರೂ ಕೂಡ ಭಾರತೀಯ ಕಾಲಮಾನದಂತೆ ಈ ಪಂದ್ಯ ಭಾನುವಾರ ಬೆಳಗ್ಗೆ 6 ಗಂಟೆಗೆ ಪ್ರಸಾರಗೊಳ್ಳಲಿದೆ.