ಶಿಡ್ಲಘಟ್ಟ ಗ್ರಾಮಾಂತರ: ವಿದ್ಯಾರ್ಥಿಗಳಷ್ಟೆ ಅಲ್ಲ ನಾವು ನೀವು ಎಲ್ಲರೂ ಉತ್ತಮವಾದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರವನ್ನು ಸೇವಿಸುವುದು ಮುಖ್ಯ. ಮನೆಯಲ್ಲೆ ಮಾಡಿದ ಅಡುಗೆ, ಹಣ್ಣು, ಹಸಿ ತರಕಾರಿಯನ್ನು ಹೆಚ್ಚೆಚ್ಚು ಸೇವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ವಿದ್ಯಾರ್ಥಿಗಳಿಗೆ ತಿಳಿಸಿದರು.
ತಾಲ್ಲೂಕಿನ ವೈ.ಹುಣಸೇನಹಳ್ಳಿ ಸರಕಾರಿ ಶಾಲೆಯಲ್ಲಿ ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಹಾಗೂ ಪೌಷ್ಟಿಕ ಆಹಾರ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ದೈಹಿಕವಾಗಿ ಬೆಳೆಯುತ್ತಿರುವ ಹಂತದಲ್ಲಿದ್ದು, ಈ ಹಂತದಲ್ಲಿ ಹಸಿರು ತರಕಾರಿ ಸೊಪ್ಪು ಹಣ್ಣು ಹಾಗೂ ಮನೆಯಲ್ಲೇ ತಯಾರಿಸಿದ ಸಮತೋಲಿತ ಪೌಷ್ಟಿಕ ಆಹಾರ ಸೇವಿಸುವುದು ಮುಖ್ಯ. ಹೊರಗೆ ಬೀದಿ ಬದಿ ತಯಾರಿಸುವ ಜಂಕ್ ಫುಡ್, ಕರಿದ ಮಸಾಲೆ ಪದಾರ್ಥಗಳ ಸೇವನೆಯನ್ನು ತ್ಯಜಿಸಬೇಕೆಂದರು.
ಆರೋಗ್ಯ ಕೈ ಕೊಟ್ಟರೆ ಉತ್ತಮ ಶಿಕ್ಷಣ, ಜ್ಞಾನ ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ನಿಮ್ಮ ಭವಿಷ್ಯ ಮುಸುಕಾಗಲಿದೆ ಎಂದ ಅವರು ಉತ್ತಮ ಪೌಷ್ಟಿಕ ಆಹಾರ ಸೇವಿಸಿ ಉತ್ತಮ ಆರೋಗ್ಯದೊಂದಿಗೆ ಉತ್ತಮ ಬದುಕು ನಿಮ್ಮದಾಗಲಿ ಎಂದು ಆಶಿಸಿದರು.ಮೊಬೈಲ್ ಬಳಕೆ ಮಿತವಾಗಿರಲಿ, ಅಧ್ಯಯನ ಹಾಗೂ ಜ್ಞಾನಾರ್ಜನೆಗಾಗಿ ಮಾತ್ರ ಮೊಬೈಲ್ ನ ಬಳಕೆ ಇತಿ ಮಿತಿಯಲ್ಲಿ ಇರಲಿ ಎಂದು ಕಿವಿ ಮಾತನ್ನು ಹೇಳಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ವಿದ್ಯಾ ವಸ್ತçದ್ ಮಾತನಾಡಿ, ಮಗುವಿಗೆ ಬೆಳವಣಿಗೆ ಹಂತದಲ್ಲಿ ಉತ್ತಮ ಸಮತೋಲಿತ ಪೌಷ್ಟಿಕ ಆಹಾರ ನೀಡಿದರೆ ದೈಹಿಕ ಹಾಗೂ ಮಾನಸಿಕವಾಗಿ ಸದೃಢ ಬೆಳವಣಿಗೆ ಆಗಲಿದೆ. ಇದು ಉತ್ತಮ ಆರೋಗ್ಯಯುತ ಬದುಕಿಗೆ ನಾಂದಿ ಹಾಡಲಿದೆ ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರವು ಮಕ್ಕಳು, ತಾಯಂದಿರ ಆರೋಗ್ಯಕ್ಕೆ ಹಚ್ಚು ಒತ್ತು ನೀಡಲಿದ್ದು ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.ಇದುವರೆಗೂ ಮಕ್ಕಳ ಪೋಷಣೆಯಲ್ಲಿ ತಾಯಂದಿರ ಪಾತ್ರಕ್ಕೆ ಮಾತ್ರವೇ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಆದರೆ ಇದೀಗ ತಾಯಿಯ ಜತೆಗೆ ತಂದೆಯೂ ಕೂಡ ಮಗುವಿನ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರವಹಿಸುತ್ತಾರೆ ಎಂದು ಮನಗಂಡು ಪುರುಷರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಿ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಕೆಲಸ ನಮ್ಮ ಇಲಾಖೆಯಿಂದ ಮಾಡಲಾಗುತ್ತಿದೆ ಎಂದರು.
ವಿವಿಧ ರೀತಿಯ ಹಸಿರು ತರಕಾರಿ, ಸೊಪ್ಪು, ಹಣ್ಣುಗಳು, ಅಂಗನವಾಡಿ ಕಾರ್ಯಕರ್ತೆಯರು ಮನೆಯಲ್ಲಿ ತಯಾರಿಸಿದ ವಿವಿಧ ರೀತಿಯ ಪೌಷ್ಟಿಕ ಆಹಾರ ಪದಾರ್ಥಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಿ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ವಿತರಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಅವರು ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ಬ್ಯಾಗು, ಲೇಖನಿ ಸಾಮಗ್ರಿಗಳನ್ನು ನೀಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ, ಹಿರಿಯ ವಕೀಲ ಎಂ.ಪಾಪಿರೆಡ್ಡಿ, ಸಿಡಿಪಿಒ ವಿದ್ಯಾವಸ್ತçದ್, ವಕೀಲರ ಸಂಘದ ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಸ್ಥಳೀಯ ಮುಖಂಡರಾದ ನಾರಾಯಣಸ್ವಾಮಿ, ಕದಿರಿನಾಯಕನಹಳ್ಳಿ ರವಿ, ವಕೀಲ ಬಸವನಪರ್ತಿ ವೆಂಕಟೇಶ್, ಬೇಕರಿ ಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಚೈತ್ರ, ಮುಖ್ಯ ಶಿಕ್ಷಕಿ ಹಂಸವೇಣಿ, ಸಿ.ಆರ್.ಪಿ ಮಂಜುನಾಥ್ ಹಾಜರಿದ್ದರು.