ಆನೇಕಲ್: ಸಾರ್ವಜನಿಕರಲ್ಲಿ ಸಂವಿಧಾನದ ಮಹತ್ವದ ಬಗ್ಗೆ ಪ್ರಜ್ಞಾವಂತ ಯುವ ಸಮುದಾಯವು ಜಾಗೃತಿ ಮೂಡಿಸುವುದು ಅತ್ಯಾವಶ್ಯಕವಾಗಿದ್ದು ಜಗತ್ತಿನಲ್ಲೇ ಉತ್ತಮ ಸಂವಿಧಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತ ಸಂವಿಧಾನದ ಆಶಯ ಮತ್ತು ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕೊಡತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಂಜುನಾಥ್ ತಿಳಿಸಿದರು.
ಅವರು ಸರ್ಜಾಪುರ ಸಮೀಪದ ಕೊಡತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ನಗರ, ಗ್ರಾಮೀಣಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಆಭಿಯಾನದ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವೇ ಸಂವಿಧಾನದ ಮೂಲ ಆಶಯವಾಗಿದ್ದು ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ಸಹಬಾಳ್ವೆ, ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಮುಂದುವರೆಯಲು ಸಂವಿಧಾನದ ಆಶಯಗಳೇ ಆಗಿವೆ ಹಾಗಾಗಿ ಭಾರತದ ಎಲ್ಲರೂ ಗೌರವಿಸುವ ಸಂವಿಧಾನದ ಆಶಯಕ್ಕೆ ಎಂದಿಗೂ ಧಕ್ಕೆ ಬರದಂತೆ ಎಚ್ಚರಿಕೆ ವಹಿಸಿ ಮುನ್ನೆಡೆಯಬೇಕಾಗಿದೆ ಎಂದರು.
ಕೊಡತಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾರಯಣಸ್ವಾಮಿ ಬಾಬು ಮಾತನಾಡಿ, ಯುವ ಜನತೆಯು ಅಂಬೇಡ್ಕರ್ ಅವರ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳಲು ಅವರ ಕೃತಿಗಳನ್ನು ಅಧ್ಯಯನ ಮಾಡಬೇಕಾಗಿದ್ದು ಭಾರತದ ಸಾಮಾಜಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಅಂಬೇಡ್ಕರ್ ಓದು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಪೂರ್ಣ ಕುಂಬಾ ಕಳಶ ಹೊತ್ತು ಸ್ವಾಗತ ರಥದ ಜೊತೆ ಸಾಗಿದರು. ಮೆರವಣಿಗೆಯಲ್ಲಿ ವೀರಗಾಸೆ, ಡೋಲು ಕುಣಿತ, ಕೀಲು ಕುದುರೆ ನೃತ್ಯ, ಬೈಕ್ ರ್ಯಾಲಿ ನಡೆಸಿದರು.ಜಾಥದಲ್ಲಿ ಭಾಗಿಯಾಗಿದ್ದವರಿಗೆ ಅಂಬೇಡ್ಕರ್ ಓದು ಪುಸ್ತಕವನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೊಡತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುರಳಿಧರ್, ಸದಸ್ಯರಾದ ಸತೀಶ್, ರಾಮಸ್ವಾಮಿ, ಶಿವಕುಮಾರ್, ನಂಜುಂಡ ರೆಡ್ಡಿ, ವೀಣಾ ರವಿ, ಆಶಾ ಚಿಟ್ಟಿಬಾಬು, ನಳಿನಾಕ್ಷಿ, ಎಸ್.ಕೆ ರಮೇಶ್, ಅಂತೋಣಿಮೇರಿ, ಮುನಿರಾಜು, ಸುಮಿತ್ರ ಜನಾರ್ದನ, ಸಂತೋಷ್, ರಘು, ಮಮತಾ, ಶುಭ ನರೇಂದ್ರಬಾಬು, ಬಾಬು ರೆಡ್ಡಿ, ರಾಧಾ ಕಾವೇರಪ್ಪ, ಶೃತಿ ಸತೀಶ್ ಹಾಗೂ ಮತ್ತಿತ್ತರರು ಹಾಜರಿದ್ದರು.