This is the title of the web page
This is the title of the web page

“ಸಮಾಜಸ್ನೇಹಿ ವ್ಯಕ್ತಿತ್ವ ರೂಢಿಸಿಕೊಳ್ಳುವುದು ಅಗತ್ಯ”

ದೊಡ್ಡಬಳ್ಳಾಪುರ: ಇಲ್ಲಿನ ಆರ್.ಎಲ್.ಜಾಲಪ್ಪ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಲರವ-2023 ಕಾಲೇಜು ಹಬ್ಬಕ್ಕೆ ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಚಾಲನೆ ನೀಡಿದರು.

ಅವರು ಮಾತನಾಡಿ, ಸಮಾಜಸ್ನೇಹಿ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳುವುದು ಅಗತ್ಯ. ಮನುಷ್ಯ ಸಂಬಂಧಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ವಿದ್ಯಾವಂತ ಸಮುದಾಯದ ಕೆಲಸವಾಗಬೇಕು. ಇತ್ತೀಚಿನ ದಿನಗಳಲ್ಲಿ ಯುವಜನತೆ ವಿಶಿಷ್ಟ ಪ್ರತಿಭೆಗಳ ಮೂಲಕ ವಿವಿಧ ವಲಯಗಳಲ್ಲಿ ಮಹತ್ವದ ಸಾಧನೆಯನ್ನು ಮಾಡುತ್ತಿರುವುದು ನಮ್ಮ ಕಣ್ಣ ಮುಂದಿದೆ ಎಂದರು.

ಖಾಸಗಿ ಸಂಸ್ಥೆಯ ಸಿಪಿಒ ಪವಿತ್ರಾ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಸಾಧನೆಯತ್ತ ಒಲವು ಬೆಳೆಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು. ಕಾಲೇಜಿನ ಆಡಳಿತಾಧಿಕಾರಿ ಬಿ.ಕೃಷ್ಣಪ್ಪ ಮಾತನಾಡಿ, ಕಾಲೇಜು ಉತ್ತಮ ಶೈಕ್ಷಣಿಕ ವಾತಾವರಣ ಹೊಂದಿರುವುದು ಮಾತ್ರವಲ್ಲದೆ, ಗುಣಮಟ್ಟದ ಫಲಿತಾಂಶವನ್ನೂ ಪಡೆಯುತ್ತಿರುವುದು ವಿಶೇಷವಾಗಿದೆ.

ಹಲವು ಹೊಸ ಕೋರ್ಸುಗಳ ಆರಂಭಕ್ಕೆ ಆಡಳಿತ ಮಂಡಲಿ ನಿರ್ಧರಿಸಿದ್ದು, ಗ್ರಾಮೀಣ ಭಾಗದಲ್ಲಿ ಉತ್ತಮ ಕಲಿಕಾ ಅವಕಾಶವನ್ನು ಉತ್ತೇಜಿಸಲಾಗುತ್ತಿದೆ ಎಂದರು.ಎಸ್‍ಡಿಯುಐಎಂ ಪ್ರಾಧ್ಯಾಪಕ ಪ್ರೊ .ಕೆ.ಆರ್.ರವಿಕಿರಣ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಲಿಕೆಗೆ ಇರುವ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಾಮಾಜಿಕ ನವೋದ್ಯಮಗಳ ಮೂಲಕ ತಾಂತ್ರಿಕ ಜ್ಞಾನವನ್ನು ಹಂಚಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದರು.

ವಿಶೇಷ ಅತಿಥಿಯಾಗಿ ಆಗಮಿಸಿದ್ದ ಚಿತ್ರನಟ ಸಲಗ ಸೂರಿ, ವಿವಿಧ ಸ್ಪರ್ಧಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು.ಕ್ಯಾಂಪಸ್‍ನ ಶೈಕ್ಷಣಿಕ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ, ಕಾಲೇಜಿನ ಪ್ರಾಂಶುಪಾಲ ಪ್ರೊ .ನರಸಿಂಹರೆಡ್ಡಿ, ಎಸ್‍ಡಿಯುಐಎಂ ಪ್ರಾಂಶುಪಾಲ ಡಾ.ಆರ್.ನಾಗರಾಜ್, ಎಸ್‍ಡಿಯುಐಆರ್‍ಎಸ್ ಪ್ರಾಂಶುಪಾಲ ಧನಂಜಯ್, ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಚಿಕ್ಕಣ್ಣ, ಪ್ರೌಢಶಾಲೆ ಮುಖ್ಯಶಿಕ್ಷಕ ಜಿಯಾವುಲ್ಲಾಖಾನ್ ಮತ್ತಿತರು ಪಾಲ್ಗೊಂಡಿದ್ದರು.