ಹೊಸಕೋಟೆ: ನಗರದ ಸಾಹಿತ್ಯ ಪರಿಚಾರಕರು ಎಂಡಿಪಿ ಕಾಫಿ ಹೌಸಿನ ಹೊಂಗೆ ಮರದಡಿಯ ಆಪ್ತ ರಂಗ ವೇದಿಕೆಯಲ್ಲಿ ಪ್ರತಿ ತಿಂಗಳು ಸಂಗೀತ ಸಾಹಿತ್ಯ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿರುತ್ತಾರೆ. ಈ ತಿಂಗಳು ಶ್ರೀರಾಮ ನವಮಿಯಂದು ಚೈತ್ರದ ಚಿಲುಮೆ ಎಂಬ ಶೀರ್ಷಿಕೆಯಲ್ಲಿ ನಶಿಸಿ ಹೋಗುತ್ತಿರುವ ಹರಿಕಥೆಯ ಪ್ರಕಾರವನ್ನು ಪ್ರಸ್ತುತ ಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ಸಂಚಾಲಕ, ಸಾಹಿತಿ ಬಾಗೇಪಲ್ಲಿ ಅವರು ಮಾತನಾಡುತ್ತಾ ನಶಿಸಿ ಹೋಗುತ್ತಿರುವ ಇಂತಹ ಕಲಾಪ್ರಕಾರಗಳನ್ನು ಪೋಷಿಸಿ ಬೆಳೆಸಬೇಕಾದ್ದು ಅಗತ್ಯ ಎಂದು ಕರೆ ನೀಡಿದರು. ಇಂದು ಜನರಲ್ಲಿ ಅತಿಯಾದ ದೂರದರ್ಶನ, ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ವ್ಯಾಮೋಹದಿಂದಾಗಿ ಹರಿಕಥೆ, ನಾಟಕದಂತಹ ಕಲೆಗಳಿಗೆ ತೀವ್ರವಾದ ಧಕ್ಕೆ ಉಂಟಾಗುತ್ತಿದೆ.
ನಗರೀಕರಣ, ಜೀವನಶೈಲಿ ಬದಲಾವಣೆಯ ಪ್ರಭಾವದಿಂದಾಗಿ ಈ ಪಿಡುಗು ಗ್ರಾಮೀಣ ಪ್ರದೇಶಗಳಿಗೂ ಸಹ ವ್ಯಾಪಿಸುತ್ತಿದ್ದು, ಕಲೆ, ಸಂಸ್ಕøತಿ ಪರಂಪರೆಯನ್ನು ಉಳಿಸಿ ಬೆಳೆಸುವ ಬಗ್ಗೆ ಸ್ವಯಂಸೇವಾ ಸಂಸ್ಥೆಗಳು ಗಮನಹರಿಸಬೇಕು ಎಂದರು.ಬೆಂಗಳೂರಿನ ನಿವೃತ್ತ ಉಪಖಜಾನೆ ಅಧಿಕಾರಿ, ವಿದ್ವಾನ್ ಸದಾಶಿವಯ್ಯನವರು ಶ್ರೀರಾಮ ಪಾದುಕ ಪಟ್ಟಾಭಿಷೇಕ ಹರಿಕಥೆಯನ್ನು ನಡೆಸಿಕೊಟ್ಟರು. ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರು ಶ್ರೀ ರಾಮನ ಕಥೆಯನ್ನು ಆಸ್ವಾದಿಸಿ ಆನಂದಭರಿತರಾದರು.
ನಿವೃತ್ತ ಗ್ರೇಡ್-2 ತಹಶೀಲ್ದಾರ್ ಜಿ.ಬಿ. ಚಂದ್ರಶೇಖರ್, ಡಾ. ಪದ್ಮಾನಂದ ಕಲ್ಲೂರ್, ಸಂತೇಕಲ್ಲಹಳ್ಳಿ ಕೃಷ್ಣ ತಿಪ್ಪಾಭಟ್ಟ ಸುರೇಶರವರುಗಳು ವಿದ್ವಾನ್ ಸದಾಶಿವಯ್ಯನವರನ್ನು ಸನ್ಮಾನಿದರು.