ದೊಡ್ಡಬಳ್ಳಾಪುರ: ಸರ್ಕಾರ ಕಲೆ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಲಾವಿದರಿಗೆ ಹೆಚ್ಚಿನ ಧನ ಸಹಾಯ ನೀಡುವುದರೊಂದಿಗೆ ಕಲಾ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ನೀಡಬೇಕಿದೆ. ನಗರದಲ್ಲಿ ಬಯಲು ರಂಗ ಮಂದಿರ ನಿರ್ಮಾಣಕ್ಕೆ ಪ್ರಕ್ರಿಯೆಗಳು ನಡೆದಿದ್ದು, ಇದಕ್ಕೆ ಅನುದಾನ ಬಿಡುಗಡೆ ಮಾಡಬೇಕಿದೆ ಎಂದು ನಗರಸಭೆ ಸದಸ್ಯ ಟಿ.ಎನ್.ಪ್ರಭುದೇವ್ ಹೇಳಿದರು.
ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಜಾತ್ರಾ ಸಾಂಸ್ಕೃತಿಕ ಸಮಿತಿ, ತಾಲೂಕು ಕಲಾವಿದರ ಸಂಘ, ಅನಿಕೇತನ ಟ್ರಸ್ಟ್, ನಗರಸಭೆ ಸಹಯೋಗದೊಂದಿಗೆ ನಗರದ ತೇರಿನ ಬೀದಿ ವಿಶ್ವೇಶ್ವರಯ್ಯ ವೃತ್ತದ ಮೈದಾನದಲ್ಲಿ ನಡೆದ ನಾಟಕೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ತೇರಿನ ಬೀದಿ ಸಮೀಪ ಸರ್ವೆ ನಂ.25ರಲ್ಲಿ ರಂಗ ಮಂದಿರ ನಿರ್ಮಾಣಕ್ಕೆ ಜಾಗ ಮೀಸಲಿರಿಸಿದೆ. ಇದಕ್ಕೆ ಶಿಕ್ಷಣ ಇಲಾಖೆ ಮಾನ್ಯತೆ ನೀಡಬೇಕಿದೆ. ಪೌರಾಣಿಕ ನಾಟಕಗಳ ಆಯೋಜನೆ ಲಕ್ಷಾಂತರ ರೂ ವೆಚ್ಚವಾಗುತ್ತಿದೆ. ವೆಂಕಟರಮಣಸ್ವಾಮಿ ಜಾತ್ರೆಯ ವೇಳೆ ನಡೆಸಿಕೊಂಡು ಬರುತ್ತಿರುವ ನಾಟಕೋತ್ಸವ 40 ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿದ್ದು, ಇದಕ್ಕೆ ಕಲಾಪ್ರೇಮಿಗಳ ಸಹಯೋಗ ಕಾರಣವಾಗಿದೆ ಸರ್ಕಾರದೊಂದಿಗೆ ಸಂಘ ಸಂಸ್ಥೆಗಳ ಸಹಕಾರವಿದ್ದರೆ ನಗರದಲ್ಲಿ ಬಯಲು ರಂಗ ಮಂದಿರ ನಿರ್ಮಾಣ ಮಾಡಲು ಅನುಕೂಲವಾಗಲಿದೆ.
ಪುರಭವನದಲ್ಲಿ ಕಲಾವಿದರ ಕೋರಿಕೆಯ ಮೇರೆಗೆ ಬಾಡಿಗೆ ಕಡಿಮೆ ಮಾಡಲಾಗಿದೆ ಎಂದರು.ನಗರಸಭಾ ಸದಸ್ಯ ಎಂ.ಜಿ.ಶ್ರೀನಿವಾಸ್ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಮೇರು ಕಲಾವಿದರಿದ್ದಾರೆ. ಇಂತಹ ಕಲಾವಿದರಿಗೆ ಜಾತ್ರಾ ನಾಟಕೋತ್ಸವ ಉತ್ತಮ ವೇದಿಕೆ ನೀಡಿದೆ. ದಶಕಗಳಿಂದ ಬಂದಿರುವ ಈ ಪರಂಪರೆ ಮುಂದುವರೆಯಲಿ ಎಂದು ಆಶಿಸಿದರು.
ಸಮಾರಂಭ ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಎಸ್.ಸುಧಾರಾಣಿ ಲಕ್ಷ್ಮೀನಾರಾಯಣ್ ಮಾತನಾಡಿ, ಸಿನಿಮಾ, ವಿದ್ಯುನ್ಮಾನ ಮಾಧ್ಯಮಗಳ ಮನರಂಜನೆಗಳ ಪೈಪೋಟಿಗಳ ನಡುವೆಯೂ ರಂಗ ಕಲೆ ಜೀವಂತವಾಗಿದ್ದು, ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಎಸ್.ವತ್ಸಲಾ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹರೀಶ್ ಗೌಡ, ಕನ್ನಡ ಪಕ್ಷದ ಅಧ್ಯಕ್ಷ ವೆಂಕಟೇಶ್, ಹಿರಿಯ ಮುಖಂಡ ಸಂಜೀವ್ ನಾಯಕ್, ಕನ್ನಡ ಜಾಗೃತ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ತಾಲೂಕು ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ, ನಿಸರ್ಗ ಯೋಗ ಕೇಂದ್ರದ ಕಾರ್ಯದರ್ಶಿ ನಟರಾಜ್,ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್,ಖಜಾಂಚಿ ಮುನಿಪಾಪಯ್ಯ, ನಿರ್ದೇಶಕರಾದ ಎಂ.ವೆಂಕಟರಾಜು, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಿ.ಶ್ರೀಕಾಂತ, ನಂದ ಕುಮಾರ್, ಜಿ.ರಾಮು, ಪ್ರಕಾಶ್ ರಾವ್, ಮೊದಲಾದವರು ಭಾಗವಹಿಸಿದ್ದರು.
ನಾಟಕೋತ್ಸವದ ಅಂಗವಾಗಿ, ಶ್ರೀ ಲಕ್ಷ್ಮೀ ಲಲಿತ ನಾಟ್ಯ ಕಲಾ ಸಂಘದಿಂದ ಭರತನಾಟ್ಯ ನಡೆಯಿತು.ಶ್ರೀ ಆಂಜನೇಯ ಕೃಪಾಪೋಷಿತ ನಾಟಕ ಮಂಡಲಿ ವತಿಯಿಂದ ಶ್ರೀ ಕೃಷ್ಣ ಗಾರುಡಿ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.