ಹನೂರು: ಕಳೆದ ಮೂರೂವರೆ ವರ್ಷಗಳಿಂದ ಅಜ್ಜೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮನ ಮೆಚ್ಚುವಂತೆ ಕಾಯಕ ಮಾಡಿದ ತೃಪ್ತಿ ನನಗಿದೆ ಎಂದು ವರ್ಗಾವಣೆಗೊಂಡ ಶಿಕ್ಷಕ ವೆಂಕಟರಾಜು ತಿಳಿಸಿದರು. ತಾಲ್ಲೂಕಿನ ಅಜ್ಜೀಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿದರು.
ನನ್ನ ಸೇವಾ ಅವಧಿಯಲ್ಲಿ ಕಳೆದ ಮೂರೂವರೆ ವರ್ಷ ಅತ್ಯಂತ ಮಹತ್ವದ ಸೇವೆಯಾಗಿದೆ. ಈ ಸೇವೆಯನ್ನು ಮಾಡಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಾನು ಇರುವಷ್ಟು ದಿನಗಳ ಕಾಲ ನನ್ನ ಆತ್ಮ ತೃಪ್ತಿಯಂತೆ ನನ್ನ ಕೈಲಾದಷ್ಟು ಪ್ರಾಮಾಣಿಕ ಪ್ರಯತ್ನ ಮಾಡುವುದರ ಮೂಲಕ ಮಕ್ಕಳ ಕಲಿಕೆಗೆ ಮಕ್ಕಳ ಪ್ರಗತಿಗೆ ಹಾಗೂ ಶಾಲೆಯ ಸರ್ವಾಂಗಣ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇದರ ಜೊತೆಗೆ ನನ್ನ ಸೇವಾ ಅವಧಿಯಲ್ಲಿ ಗ್ರಾಮಸ್ಥರು ಸಹ ಹೆಚ್ಚಿನ ಸಹಕಾರ ನೀಡುವುದರ ಮೂಲಕ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಹಾಗಾಗಿ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಮೇರಿ ಮಾತನಾಡಿ ನಮ್ಮ ಶಾಲೆಯಿಂದ ಬೇರೆ ಶಾಲೆಗೆ ವರ್ಗಾವಣೆಗೊಂಡಿರುವ ಶಿಕ್ಷಕ ವೆಂಕಟರಾಜು ಅತ್ಯಂತ ಪ್ರತಿಭಾನ್ವಿತ ಶಿಕ್ಷಕರಲ್ಲಿ ಒಬ್ಬರು. ನಮ್ಮ ಶಾಲೆ ಪಿಎಂ ಶ್ರೀ ಶಾಲೆಯಾದ ಮೇಲೆ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಇಂತಹ ಬದಲಾವಣೆಗೆ ವೆಂಕಟರಾಜುರವರು ತಮ್ಮ ತನು ಮನ ಎಲ್ಲವನ್ನು ಧಾರೆ ಎರೆದು ಸಾಕಷ್ಟು ಸಹಾಯವನ್ನು ಮಾಡಿದ್ದಾರೆ. ಅಲ್ಲದೇ ನಮ್ಮ ಶಾಲಾ ಮಕ್ಕಳ ಪ್ರವಾಸವನ್ನು ಯಶಸ್ವಿ ಮಾಡಿದ್ದೆವು. ಬಹಳ ಮುಖ್ಯವಾಗಿ ಕಳೆದ ಬಾರಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕೂಡ ಅತ್ಯಂತ ವಿಜೃಂಭಣೆಯಿAದ ಆಚರಣೆ ಮಾಡಿದ್ದೆವು. ಇದೆಲ್ಲವೂ ಕೂಡ ಅವರ ಶ್ರಮದಿಂದಲೇ ಸಾಧ್ಯ ವಾಗಿದೆ. ಸಾಕಷ್ಟು ಮಾರ್ಗದರ್ಶನ ಸಹ ಇವರಿಂದ ನಮಗೆ ಸಿಕ್ಕಿದೆ. ಹಾಗಾಗಿ ಇಂದು ವರ್ಗಾವಣೆಗೊಂಡಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದರು.
ಕಣ್ಣೀರಾಕಿದ ಮಕ್ಕಳು: ತಮ್ಮ ನೆಚ್ಚಿನ ಶಿಕ್ಷಕ ಬೇಂದ್ರೆ ವರ್ಗಾವಣೆಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಪ್ರೀತಿಯ ಶಿಕ್ಷಕರನ್ನು ಅಪ್ಪಿಕೊಂಡು ಮಕ್ಕಳು ಕಣ್ಣೀರು ಹಾಕುತ್ತಿದ್ದ ದೃಶ್ಯ ಜೊತೆಗೆ ಶಿಕ್ಷಕರ ಕಣ್ಣಲ್ಲಿ ಸಹ ಕಂಬನಿ ಮಿಡಿಯಿತು. ಇದೇ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಮೇರಿ, ಸಹ ಶಿಕ್ಷಕರಾದ ಕಲ್ಪನಾ, ಮಹದೇವಮ್ಮ, ವಾಸವಿ, ಮಂಗಳಮ್ಮ, ರಮ್ಯಾ, ಶ್ರುತಿ,ಕೊಳಂದೈ ರಾಜು ಹಾಗೂ ಗ್ರಾಮಸ್ಥರಾದ ಕುಮಾರ್, ಸುರೇಶ್ ಉಪಸ್ಥಿತರಿದ್ದರು.



