ಬೆಂಗಳೂರು: ಕೋರಮಂಗಲದ ಸೇಂಟ್ ಫ್ರಾನ್ಸಿಸ್ ಕಾಲೇಜು ಮತ್ತು ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸಂವಿಧಾನ ಪೀಠಿಕೆ ಕುರಿತಾದ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.
ಇಂದು ಸಂಜೆ ಪತ್ರಿಕೆ ಪ್ರಧಾನ ವ್ಯವಸ್ಥಾಪಕ ಸಂಪಾದಕರಾದ ಡಾ. ಜಿ ವೈ ಪದ್ಮ ನಾಗರಾಜ್ ರವರು ಸಂವಿಧಾನದ ಮೂಲ ಪ್ರತಿಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಸಮತಾ ಬಿ. ದೇಶಮನೆ ಅವರಿಂದ ಪಡೆದು ಕಾರ್ಯಕ್ರಮಕ್ಕೆ ತರುವ ಮೂಲಕ ಎಲ್ಲರಲ್ಲಿ ಪುಳುಕವನ್ನು ಉಂಟುಮಾಡಿದರು.
ವಿಶೇಷವಾಗಿ ಸಂವಿಧಾನ ಮೂಲ ಪ್ರತಿಯನ್ನು ಸ್ಪರ್ಶ ಮಾಡುವ ಧನ್ಯ ಕ್ಷಣಗಳಿಗೆ ಸಾಕ್ಷಿಯಾದರು. ಸಂವಿಧಾನ ಪೀಠಿಕೆಯನ್ನು ಸಹ ಬೋದಿಸಿದರು.ಜೀವನದಲ್ಲಿ ಕೆಲವು ಸಂದರ್ಭಗಳಲ್ಲಿ ಮತ್ತು ಕೆಲವೇ ಜನರಿಗೆ ದೊರಕುವ ಅವಕಾಶವನ್ನು ಕಾರ್ಯಕ್ರಮದಲ್ಲಿ ಎಲ್ಲರಿಗೂ ಮಾಡಿಕೊಟ್ಟಿದ್ದಕ್ಕಾಗಿ ಕಾಲೇಜಿನ ಪರವಾಗಿ ಡಾ. ಪದ್ಮ ನಾಗರಾಜ್ ರವರನ್ನು ಎಲ್ಲರೂ ಅಭಿನಂದಿಸಿದರು.
ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕರಾದ ಡಾ. ಗುಣವಂತ ಮಂಜು ರವರು ಮಾತನಾಡುತ್ತಾ ಭಾರತ ದೇಶದ ದೂರ ದೃಷ್ಟಿಯ ಆಲೋಚನೆ ಮತ್ತು ಸಮಗ್ರ ವಿಚಾರ ಧಾರೆಗಳ ಮೇಲೆ ಬೆಳಕು ಚೆಲ್ಲುವ ಪ್ರಾಮಾಣಿಕ ಮತ್ತು ಪರಿಶೋಧಾತ್ಮಕವಾದ ಶ್ರೇಷ್ಠ ಗ್ರಂಥ ಸಂವಿಧಾನ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಜವರೇಗೌಡ ಮಾತನಾಡುತ್ತಾ ವಿಶ್ವದ ಯಾವುದೇ ದೇಶಗಳಲ್ಲಿ ಇರದಷ್ಟು ಅಮೂಲ್ಯವಾದ ವಿಷಯ ವೈವಿಧ್ಯತೆಯನ್ನು ಒಳಗೊಂಡಿರುವ ಸಂವಿಧಾನವು ಭಾರತೀಯರ ಬದುಕನ್ನು ಕಟ್ಟಿಕೊಡುವ ಮೂಲ ಧಾತು ಎಂದರು.ಹಲೋ ಪದವೀಧರರೇ ಕೆ.ಆರ್ ವೆಂಕಟೇಶ್ ಗೌಡ ರವರು ಮಾತನಾಡಿ ಭಾರತದ ಸಂವಿಧಾನ ಕೇವಲ ಮನುಷ್ಯರಿಗೆ ಮಾತ್ರವಲ್ಲ ಪಶು ಪಕ್ಷಿಗಳಿಗೂ ಅದರಲ್ಲಿ ಒಂದು ಪಾಲಿದೆ, ಇಂತಹ ಸರ್ವಶ್ರೇಷ್ಠ ಸಂವಿಧಾವನ್ನು ನೀಡಿದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಎಂದರು.
ಡಾ. ಜಯಚಂದ್ರ ರಾಜು ರವರು ಮಕ್ಕಳ ಮನೋವಿಕಾಸದ ಜೊತೆಗೆ ಪ್ರತಿ ಭಾರತೀಯರು ವಿದ್ಯಾರ್ಥಿಗಳು ನಮ್ಮ ಭಾರತದ ಭವಿಷ್ಯಕ್ಕೆ ಮುನ್ನುಡಿಯಾದ ಸಂವಿಧಾನದ ಆಶಯಗಳನ್ನು ಅರಿತು ಬಾಳಬೇಕು ಎಂದರು. ಡಾ.ಮಹೇಂದ್ರನಾಥ ಶರ್ಮಾ ಗುರೂಜಿ ರವರು ತಮ್ಮ ವಿಚಾರವನ್ನು ಮಂಡಿಸುತ್ತಾ ಭಾರತದ ಅರ್ಥವನ್ನು ವಿವರಿಸುವ ಜೊತೆಗೆ ಭಗವತ್ ಗೀತೆ ಬದುಕಿನ ಸಾಕ್ಷಾತ್ಕಾರ ಸಂವಿಧಾನ ಬದುಕನ್ನು ರೂಪಿಸುವ ಸಾಕ್ಷಾತ್ಕಾರ ಎಂದು ಅಭಿಪ್ರಾಯಪಟ್ಟರು.
ಡಾ ಟಿ.ವಿ ಸಂಪಂಗಿ ರವರು ಬಾಬಾ ಸಾಹೇಬ್ ಅಂಬೇಡ್ಕರ್ ರವರು ಶಿಕ್ಷಣ ಕಲಿಯಲು ಪಟ್ಟ ಕಷ್ಟಗಳನ್ನು ವಿವರಿಸುತ್ತಾ ಇಂದು ನಾವೆಲ್ಲರೂ ಒಂದಷ್ಟು ನೆಮ್ಮದಿಯ ಬದುಕಿನ ಪಯಣ ಸಾಗಿಸುತ್ತಿರಲು ಕಾರಣ ನಮ್ಮ ಸಂವಿಧಾನ ಎಂದರು. ಶ್ರೀ ಗೋವಿಂದಹಳ್ಳಿ ಕೃಷ್ಣೇಗೌಡ ಮಾತನಾಡಿ ಸಂವಿಧಾನ ಪೀಠಿಕೆ ಬದುಕನ್ನು ರೂಪಿಸುವ ಪಾಠ ಅದನ್ನು ವಿದ್ಯಾರ್ಥಿಗಳು ಕಲಿಯುವ ಮೂಲಕ ಭವ್ಯ ಭಾರತಕ್ಕೆ ಕೊಡುಗೆ ಆಗಬಹುದು ಎಂದರು.
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದ ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಜೋಗಿ ರವರು ಮಾತನಾಡಿ ಸಂವಿಧಾನದ ಪರಿಚ್ಛೇದಗಳು ಮತ್ತು ಆಶಯಗಳನ್ನು ವಿವರಿಸಿ 100 ಕೋಟಿಗೂ ಅಧಿಕ ಜನ ಬದುಕುವ ಅಖಂಡ ಭಾರತಕ್ಕೆ ನೀಡಿದ ದೂರ ದೃಷ್ಟಿಯ ಬೆಳಕು ಸಂವಿಧಾನ ಎಂದು ತಿಳಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲರಾದ ಡಾ. ಸುಬ್ಬರಾವ್ ರವರು ಮಾತನಾಡುತ್ತಾ ಇಂದಿನ ಯುವ ಪೀಳಿಗೆಯ ಆಧುನಿಕ ವಿಷಯಗಳನ್ನು ತಿಳಿದುಕೊಳ್ಳುವುದರ ಜೊತೆಗೆ, ಶಿಕ್ಷಣದ ಜೊತೆಗೆ ಇಂದು ಸಂವಿಧಾನದ ಒಟ್ಟಾರೆ ವಿಷಯಗಳನ್ನು ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ ಯಾಕೆಂದರೆ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಆಯುಧ ಸಂವಿದಾನ ಎಂದರು. ಸೆಂಟ್ ಫ್ರಾನ್ಸಿಸ್ ಕಾಲೇಜಿನ ನಿರ್ದೇಶಕರಾದ ಫಾದರ್ ಪೀಟರ್ ರವರು ಇಂತಹ ಉತ್ತಮ ಮತ್ತು ಶ್ರೇಷ್ಠ ಕಾರ್ಯಕ್ರಮವನ್ನು ರೂಪಿಸಿ ಮಕ್ಕಳ ಜ್ಞಾನಾರ್ಜನೆಗೆ ಕಾರಣವಾಗಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಕಾಲೇಜಿನಲ್ಲಿ ಲತೀಫ್ ಅಹಮ್ಮದ್, ಶ್ರೀ ನಿತಿನ್ ಪಾಟೀಲ್, ಅನನ್ಯ ರವಿಬಾಬು, ಶ್ರೀ ಅಮರೇಗೌಡ ಶ್ರೀ ವಿಶ್ವ ಹಾಗೂ ಎನ್ಎಸ್ಎಸ್ ,ಎನ್ಸಿಸಿ ಮತ್ತು ಕಾಲೇಜಿನ ಜಿಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.