ಚನ್ನಪಟ್ಟಣ: ಬಿಜೆಪಿ ಪಕ್ಷವನ್ನ ಹಲವು ಮಹನೀ ಯರು ತಳಮಟ್ಟದಿಂದ ಕಟ್ಟಿದ್ದಾರೆ. ಹಾಗಾಗಿ ಪಕ್ಷದ ಗೌರವ ಕಾಪಾಡುವ ಹಾಗೂ ಪಕ್ಷಕ್ಕೆ ಹೆಚ್ಚಿನ ಶಕ್ತಿ ತುಂಬುವ ಜವಾಬ್ದಾರಿ ಎಲ್ಲ ಪದಾಧಿಕಾರಿಗಳ ಮೇಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್.ಆನಂದಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಪದಾಧಿಕಾರಿಗಳಿಗೆ ನೀಡಿರುವ ಜವಾಬ್ದಾರಿಗೆ ನ್ಯಾಯ ಒದಗಿಸುವ ಮೂಲಕ ತಳಮಟ್ಟದಿಂದ ಪಕ್ಷ ಕಟ್ಟಲು ಇಂದಿನಿಂದಲೇ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ತೂಬಿನಕೆರೆ ರಾಜು ಮಾತನಾಡಿ, ಪದಾಧಿಕಾರಿಗಳು ಪಕ್ಷ ಹಾಗೂ ನಾಯಕತ್ವದ ನೆಲೆಗಟ್ಟಿನಲ್ಲಿ ಕೆಲಸ ಮಾಡಬೇಕು.
ಪಕ್ಷ ನಮ್ಮೆಲ್ಲರಿಗೂ ತಾಯಿಯಿದ್ದಂತೆ. ತಾಯಿಯ ಗೌರವವನ್ನು ಕಾಪಾಡುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ. ಪಕ್ಷದ ಪದಾಧಿಕಾರಿಗಳು ಪಕ್ಷ ಹಾಗೂ ನಾಯಕತ್ವಕ್ಕೆ ನಿಷ್ಠರಾಗಿರಬೇಕು.ಪಕ್ಷದ ತೀರ್ಮಾನಗಳನ್ನು ಗೌರವಿಸುವ ಹಾಗೂ ಅವುಗಳನ್ನು ಪಾಲಿಸುವ ಕರ್ತವ್ಯ ನಮ್ಮಗಳ ಮೇಲಿದೆ. ಪಕ್ಷ ನೀಡಿರುವ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸೋಣ ಎಂದರು.
ಗುಂಪುಗಾರಿಕೆ ಸಲ್ಲದು: ಅನಗತ್ಯ ಗುಂಪುಗಾರಿಕೆ ಹಾಗೂ ಬಣ ರಾಜಕೀಯ ಮಾಡದೇ, ಪಕ್ಷದ ಗೌರವವನ್ನು ಎತ್ತಿಹಿಡಿಯೋಣ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಬಲ ತುಂಬೋಣ ಎಂದು ಮನವಿ ಮಾಡಿದರು.ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಸಲಾಯಿತು. ಮೈತ್ರಿ ಪಕ್ಷದೊಂದಿಗೆ ಸಮನ್ವಯತೆ ಸಾಧಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ನಗರ ಘಟಕದ ಅಧ್ಯಕ್ಷ ಹಲಸಿನಮರದದೊಡ್ಡಿ ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಕೆ ಟಿ ಜಯರಾಂ, ತಾಲೂಕು ಚುನಾವಣಾ ಉಸ್ತುವಾರಿ ಮಾಗಡಿ ಧನಂಜಯ್, ತಾಲೂಕು ಚುನಾವಣಾ ಸಹಪ್ರಭಾರಿ ಶಿವಲಿಂಗಯ್ಯ (ಕುಳ್ಳಪ್ಪ), ಎಸ್ಸಿ ಮೋರ್ಚಾ ಅಧ್ಯಕ್ಷ ನೀಲಸಂದ್ರ ಸಿದ್ದರಾಮಯ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ಕಲಾವತಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಾಳಗಾಳು ರಾಮು, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಅಭಿಷೇಕ್ ಚೆಕ್ಕೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.