ನೆಲಮಂಗಲ: ಸಮಾಜದಲ್ಲಿ ಸಮಾನತೆ ಹಾಗೂ ಸರ್ವರಿಗೂ ಹಿತ ಬಯಸುವ ಧರ್ಮ ವೀರಶೈವ ಧರ್ಮವು ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಮಾಜ ಸುಧಾರಿಸುವುದು ಮಠಮಾನ್ಯಗಳಿಂದ ಸಾಧ್ಯ ಎಂದು ಬೆಂಗಳೂರಿನ ವಿಭೂತಿಪುರ ವೀರಸಿಂಹಾಸನ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.
ತಾಲ್ಲೂಕಿನ ಸೋಂಪುರ ಹೋಬಳಿಯ ಶಿವಗಂಗೆಯ ಶ್ರೀಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠದಲ್ಲಿ ನಡೆದ ?ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಮತ್ತು ಶಿವಗಂಗಾ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಧರ್ಮೋಪದೇಶ ನೀಡಿ ಮಾತನಾಡಿದರು.ಸುಮಾರು ವರ್ಷಗಳಿಂದ ಈ ಮಠದಲ್ಲಿ ಅನ್ನ ಅಕ್ಷರ ದಾಸೋಹವನ್ನು ನೀಡುವ ಮೂಲಕ ಸಮಾಜದಲ್ಲಿ ಶಾಂತಿ ನಿರ್ಮಾಣ ಮಾಡಿ ಹಾಗೂ ಶಿವಗಂಗಾಶ್ರೀ ಪ್ರಶಸ್ತಿ ನೀಡುತ್ತಿದೆ.
ಇದರಿಂದ ಅನೇಕ ಸಾಧನೆಗೈದ ಸಾಧಕರನ್ನು ಗುರುತಿಸಲಾಗುತ್ತಿದೆ. ಜಾತಿಜಾತಿಗಳ ಮದ್ಯೆ ವೈಷಮ್ಯ ಬೇಡ, ಮಾನವ ಕುಲ ಒಂದೇ, ದರ್ಮ ದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಶಿವನ ಇನ್ನೊಂದು ಗುರುತೇ ಶ್ರೀಜಗದ್ಗುರು ರೇಣುಕಾಚಾರ್ಯರು ಎಂದರು.ಶಾಸಕ ಎನ್.ಶ್ರೀನಿವಾಸ್ ಮಾತನಾಡಿ ನಮ್ಮ ಕ್ಷೇತ್ರದಲ್ಲಿರುವ ಅನೇಕ ಮಠಗಳಲ್ಲಿ ಶೈಕ್ಷಣ ಕವಾಗಿ, ಧಾರ್ಮಿಕವಾಗಿ, ದಾಸೋಹವನ್ನು ಮಾಡುತ್ತಿದ್ದು ನಾನು ಈ ಕ್ಷೇತ್ರಕ್ಕೆ ಶಾಸಕನಾಗಿರುವುದು ಪುಣ್ಯ ಎಂದರು.
ಮೇಲಣಗವಿ ಮಠದ ಡಾ.ಶ್ರೀಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜ ಸೇವೆಯನ್ನು ಮಾಡುತ್ತಿರುವ ಹಲವರನ್ನು ಆಯ್ಕೆ ಮಾಡಿ ಗೌರವಿಸಿದ್ದು ಈ ಬಾರಿಯ ಪ್ರಶಸ್ತಿಯನ್ನು ಸಮಾಜಕ್ಕೆ ಸದ್ದಿಲ್ಲದೇ ಸೇವೆ ಮಾಡಿರುವವರಿಗೆ ಪ್ರಧಾನ ಮಾಡಿರುವುದು ಇತಿಹಾಸ ಎಂದರಲ್ಲದೆ ಮುಂದಿನ ವರ್ಷದ `ಶಿವಗಂಗಾ ಶ್ರೀ’ ಪ್ರಶಸ್ತಿಗೆ ನೋಣವಿನಕೆರೆಯ ಶ್ರೀಕಾಡುಸಿದ್ದೇಶ್ವರ ಮಠದ ಸ್ವಾಮಿಗಳಾದ ಶ್ರೀಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳಿಗೆ ನೀಡಲಾಗುತ್ತದೆ ಎಂದು ಘೋಷಿಸಿದರು.
ವೇದಿಕೆಯಲ್ಲಿ ಶಿವಗಂಗಾ ಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಎನ್.ಎಸ್.ನಟರಾಜು ಮಾತನಾಡಿ ಜನಾನುರಾಗಿ ಸೇವೆ ಮಾಡಲು ಪ್ರೇರಣೆಯಾಗಿ ಇಂದು ಶ್ರೀಮಠವು ಪ್ರಶಸ್ತಿ ನೀಡಿರುವುದು ನಮಗೆ ಸಾಕಷ್ಟು ಖುಷಿಯನ್ನು ನೀಡಿದ್ದು ಅದಕ್ಕಾಗಿ ಶ್ರೀಮಠಕ್ಕೆ ಅಭಾರಿಯಾಗಿದ್ದೇನೆ ಎಂದರು.ನೆಲಮಂಗಲದ ಲೇಖಕರಾದ ಎಂ.ವಿ.ನೆಗಳೂರರವರ ವಿಚಾರ-ಆಚಾರ-ವಿಹಾರ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸರ್ಕಾರ ಮತ್ತು ದಾನಿಗಳ ನೆರವಿನಡಿ ನಿರ್ಮಿಸಲಾಗಿರುವ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಲಾಯಿತು.
ವೇದಿಕೆಯಲ್ಲಿ ನೋಣವಿನಕೆರೆಯ ಶ್ರೀಕಾಡುಸಿದ್ದೇಶ್ವರ ಮಠದ ಶ್ರೀಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ, ಶ್ರೀರಂಗಪಟ್ಟಣದ ತ್ರಿನೇತ್ರ ಮಹಂತ ಶಿವಯೋಗಿಶ್ವರ ಸ್ವಾಮಿಗಳು, ಹೊನ್ನಮ್ಮಗವಿಮಠದ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮೀಜಿ,ಗೊಲ್ಲಹಳ್ಳಿ ಸಿದ್ದರಾಮೇಶ್ವರ ಮಠದ ವಿಭವವಿದ್ಯಾಶಂಕರ ಸ್ವಾಮಿಜಿ, ನೆಲಮಗಲದ ಬಸವಣ್ಣದೇವರ ಮಠದ ಶ್ರೀಸಿದ್ದಲಿಂಗ ಸ್ವಾಮಿಗಳು, ಶನಿವಾರ ಸಂತೆಯ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಬೆಂಗಳೂರಿನ ಚಂದ್ರಶೇಖರಯ್ಯ, ಮುಂತಾದವರು ಭಾಗಿಯಾಗಿದ್ದರು.