ನೆಲಮಂಗಲ: “ಹಳ್ಳಿಗಳಲ್ಲಿ ಹೆಚ್ಚಾಗಿ ರೈತಾಪಿ ಜನ ಬದುಕುತ್ತಾರೆ. ನೀವೆಲ್ಲ 20 ವರ್ಷಗಳ ಕಾಲ ಯಾವ ಆಸ್ತಿಪಾಸ್ತಿಯನ್ನು ಮಾಡಲು ಹೋಗದೆ, ಕಷ್ಟಪಟ್ಟು ಹೊಟ್ಟೆ ಬಟ್ಟೆ ಕಟ್ಟಿ ನಿಮ್ಮ ಮಕ್ಕಳನ್ನು ಓದಿಸಿ, ವಿದ್ಯಾವಂತರನ್ನಾಗಿ ಮಾಡಿಸಿ, ಅವರಿಗೆ ಸಂಸ್ಕಾರ ಕಲಿಸಿ.
ಆನಂತರ ಅವರುಗಳೇ ಒಂದು ಆಸ್ತಿಯಾಗಿ ನಿಮ್ಮನ್ನು ಕಾಪಾಡುತ್ತಾರೆ” ಎಂದು ಸಮಾಜ ಸೇವಕ ಜಗದೀಶ್ ಚೌಧರಿ ಅವರು ತಿಳಿಸಿದ್ದಾರೆ. ತಾಲೂಕು ಕಸಾಪ ವತಿಯಿಂದ ಹಮ್ಮಿಕೊಂಡಿರುವ “ಹಳ್ಳಿಯಿಂದ ಹಳ್ಳಿಗೆ ಸಾಹಿತ್ಯ ಸಂಚಾರ” ಕಾರ್ಯಕ್ರಮವನ್ನು, ಧಾನ್ಯಗಳನ್ನು ತೂರುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿಶೇಷ ಉಪನ್ಯಾಸ ನೀಡಿದ ಲೇಖಕ ಚಿಂತಕ ಮಣ್ಣೆ ಮೋಹನ್ ರವರು “ರೈತರು ವರ್ಷವೆಲ್ಲ ಬೆಳೆದ ಪಸಲನ್ನು ಹಸನು ಮಾಡಿ ಮನೆಗೆ ತುಂಬಿಸಿಕೊಳ್ಳುವ ಸುಗ್ಗಿ ಕಾಲ ಸಂಕ್ರಾಂತಿ. ಹಾಗಾಗಿ ಇದು ರೈತರ ಹಬ್ಬ. ರೈತರ ಜೊತೆ ಜಾನುವಾರುಗಳು ವರ್ಷವೆಲ್ಲ ದುಡಿದಿರುತ್ತವೆ, ಅವು ಕೂಡ ಇಂದು ಸಿಂಗರಿಸಿಕೊಂಡು ಸಂಕ್ರಾಂತಿಗೆ ಸಾಕ್ಷಿಯಾಗವೆ, ಹಾಗಾಗಿ ಇದು ದನಕರುಗಳ ಹಬ್ಬ.
ನಮ್ಮ ಹೆಣ್ಣು ಮಕ್ಕಳು ಬೆಳಗಿನ ಜಾವದಿಂದ ಸಂಜೆವರೆಗೂ ಬಿಡುವಿಲ್ಲದಂತೆ ಹಬ್ಬದ ಸಂಭ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ, ಹಾಗಾಗಿ ಇದು ಹೆಣ್ಣು ಮಕ್ಕಳ ಹಬ್ಬ. ಮಕ್ಕಳು ಮನೆ ಮನೆಗೆ ಹೋಗಿ ಎಳ್ಳುಬೆಲ್ಲವನ್ನು ಬೀರುತ್ತಿದ್ದಾರೆ, ಹಾಗಾಗಿ ಇದು ಮಕ್ಕಳ ಹಬ್ಬ. ಹಾಗೆಯೇ ಇಂದು ಕಸಾಪ ವತಿಯಿಂದ ಹಳ್ಳಿಯಿಂದ ಹಳ್ಳಿಗೆ ಸಾಹಿತ್ಯ ಸಂಚಾರದ ಹಬ್ಬ ಕೂಡ ಎಂದು ತಿಳಿಸಿದರು.
ರಾಜ್ಯದ ಇತಿಹಾಸದಲ್ಲಿಯೇ ತಾಲ್ಲೂಕು ಕಸಾಪ ವತಿಯಿಂದ ನಡೆಸುತ್ತಿರುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ ಅವರು, ಪ್ರಕಾಶ್ ಮೂರ್ತಿಯವರ ಕನಸಿನ ಕೂಸಾದ ಈ ಕಾರ್ಯಕ್ರಮವನ್ನು ನಾನೇ ಖುದ್ದು ಕುಮಾರಿ ವರ್ಷ ಮತ್ತು ರಘು ರವರ ಹೆಗಲಿಗೆ ಹೊರಿಸಿದ್ದೆ. ಅವರು ಅತ್ಯಂತ ಯಶಸ್ವಿಯಾಗಿ ಈ ಚೊಚ್ಚಲ ಕಾರ್ಯಕ್ರಮ ನಡೆಸಿದ್ದಾರೆ. ಹಾಗಾಗಿ ಅವರಿಗೆ ಅಭಿನಂದನೆಗಳು ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ರಾಜ್ಯ ಮತ್ತು ತಾಲೂಕಿನಲ್ಲಿ ಕಸಾಪ ಕಟ್ಟಿದ ಮಹನೀಯರ ಕಾರ್ಯವನ್ನು ಸವಿಸ್ತಾರವಾಗಿ ವಿವರಿಸಿ ಸ್ಮರಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಮಾಂಜಿನಪ್ಪನವರು ಮಾತನಾಡಿ “ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಇರುವ ಕಲೆ, ಸಾಹಿತ್ಯ, ಸಂಗೀತ, ಜನಪದ ಮುಂತಾದ ನಮ್ಮ ಸಂಸ್ಕೃತಿಯನ್ನು ಹೊರ ತೆಗೆಯುವ ಕಸಾಪ ಪ್ರಯತ್ನ ಅಭಿನಂದನೀಯ” ಎಂದು ಶ್ಲಾಘಿಸಿದರು.
ಆತ್ಮರಾಮ ದೇವಸ್ಥಾನದ ಪ್ರಧಾನ ಅರ್ಚಕರಾದ ರಘು, ತಾಲೂಕು ಮಹಿಳಾ ಪ್ರತಿನಿಧಿ ಮಂಜುಳಾ ವೆಂಕಟೇಶ್, ಸ್ವಸಹಾಯ ಸಂಘಗಳ ಎಂ ಬಿ ಕೆ ರಾಧ ಮಹೇಶ್, ಹೋಬಳಿ ಕಸಾಪ ಅಧ್ಯಕ್ಷ ಶ್ರೀಕಾಂತ್, ಪ್ರತಿನಿಧಿ ಶ್ರೀನಿವಾಸ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜು, ನಿರ್ಮಾಪಕ ನಾಗರಾಜು, ಮಹೇಶ್, ಸುರೇಶ್, ಕಲಾವಿದ ಕೃಷ್ಣಯ್ಯ, ರಾಮು, ಆನಂದ ಮೌರ್ಯ, ವರ್ಧನ್ ಮತ್ತು ಚಂದನ್ ಹೆಚ್ ಆರ್, ವಿದ್ಯಾರ್ಥಿಗಳ ಪೋಷಕರು, ನರಸೀಪುರ ಮತ್ತು ಅಕ್ಕಪಕ್ಕದ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಸಾಪ ತಾಲ್ಲೂಕು ಗೌರವ ಕಾರ್ಯದರ್ಶಿ ಬಿ ಪ್ರಕಾಶ್ ಮೂರ್ತಿ ಸ್ವಾಗತ ಕೋರಿ, “ಹಳ್ಳಿಯಲ್ಲಿ ಸುಗ್ಗಿ ಸಂಭ್ರಮದ ನಂತರ, ವ್ಯವಸಾಯದ ಕೆಲಸ ಮುಗಿದ ನಂತರ, ಪ್ರತಿಯೊಂದು ಹಳ್ಳಿಯಲ್ಲೂ ಈ ಒಂದು ಕಲೆ ಅರಳುತ್ತಿತ್ತು. ಆದರೆ ಇಂದು ಮೊಬೈಲ್ ಹಾವಳಿಯಿಂದ ಗ್ರಾಮೀಣ ಭಾಗದ ಕಲೆ ನಶಿಸಿ ಹೋಗುತ್ತಿದೆ. ಇದರ ಚಿಂತನೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮನಗೊಂಡು ಇಡೀ ತಾಲೂಕಿನಾತ್ಯಂತ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ” ಎಂದರು.
ಶ್ರೀ ಆತ್ಮ ರಾಮ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಮತ್ತು ಹಾಲೇನಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಿದ್ದಗಂಗಮ್ಮ ಮತ್ತು ತಂಡದವರಿಂದ ಸೋಬಾನೆ ಪದ, ಕುಮಾರಿ ವಿದ್ಯಾ ಮತ್ತು ತಂಡದವರಿಂದ ರಂಗೋಲಿ ಸ್ಪರ್ಧೆ, ಜನಪದ ಗೀತ ಗಾಯನ, ಕೋಲಾಟಗಳು, ಬಬ್ರುವಾಹನ ಏಕಪಾತ್ರಭಿನಯ ನೆರೆದಿದ್ದವರಿಗೆ ರಸದೌತಣ ನೀಡಿದವು.
ಗ್ರಾಮಸ್ಥರು ಹಬ್ಬದ ಸಂಭ್ರಮದ ನಡುವೆಯೂ ಅಬ್ಬರದ ಸಂಖ್ಯೆಯಲ್ಲಿ ನೆರೆದು, ಅಬ್ಬಬ್ಬಾ ಎನ್ನುತ್ತಾ ಕಾರ್ಯಕ್ರಮಕ್ಕೆ ಮೆರಗು ತಂದರು. ಕುಮಾರಿ ವರ್ಷ ಮತ್ತು ರಘು ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂಧರ್ಭದಲ್ಲಿ ಮಾತನಾಡಿದ ರಘು, ಯುವಕರಿಗೆ ಜೀವನದ ಯಶಸ್ವಿ ಸೂತ್ರದ ಮಹತ್ವ ಸಾರಿದರು.