ಹೊಸಕೋಟೆ: ಮನುಷ್ಯ ತನ್ನ ಮನಸ್ಸನ್ನು ನಿಯಂತ್ರಿಸಿಕೊಳ್ಳುವುದರೊಂದಿಗೆ ದೈಹಿಕ ಸಮತೋಲನ ಕಾಯ್ದುಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಲು ಯೋಗ ಪರಿಣಾಮಕಾರಿ ಸಾಧನವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ನ ದಕ್ಷಿಣ ರಾಜ್ಯಗಳ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಹೇಳಿದರು.
ಅವರು ನಗರದ ವಿವೇಕಾನಂದ ವಿದ್ಯಾಕೇಂದ್ರದ ಆವರಣದಲ್ಲಿ ಸ್ವಾಮಿ ವಿಏಕಾನಂದ ಯೋಗ ಶಿಕ್ಷಣ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಬಹಳಷ್ಟು ಜನರು ಜೀವನಶೈಲಿಯ ಬದಲಾವಣೆಯಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಯಾವುದೇ ವೈದ್ಯಕೀಯ ಚಿಕಿತ್ಸೆ ಲಭ್ಯವಿಲ್ಲ. ಆದರೆ ನಿರಂತರ ಯೋಗಾಭ್ಯಾಸದಿಂದ ಮಾನಸಿಕ ಏಕಾಗ್ರತೆ ಸಾಧಿಸುವುದರಿಂದ ಸಮಸ್ಯೆಯಿಂದ ಹೊರಬರಬಹುದಾಗಿದೆ.ಇಡೀ ವಿಶ್ವಕ್ಕೆ ಯೋಗವನ್ನು ಕಲಿಸಿಕೊಟ್ಟ ಕೀರ್ತಿ ಭಾರತ ದೇಶಕ್ಕೆ ಸಲ್ಲುವಂತಹುದು. ಮನುಷ್ಯ ದೈನಂದಿನ ಬದುಕಿನ ಒತ್ತಡದ ನಡುವೆ ಮನಸ್ಸಿನ ಸ್ಥಿಮಿತತೆಯನ್ನು ಕಳೆದುಕೊಂಡಿರುತ್ತಾನೆ, ಅದರೆ ಆ ಮನಸ್ಸನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ.
ಆದ್ದರಿಂದ ನಿತ್ಯ ಜೀವನದಲ್ಲಿ ಯೋಗವನ್ನು ರೂಡಿಸಿಕೊಂಡರೆ ಮನಸ್ಸು ಸದಾಕಾಲ ನಮ್ಮ ನಿಯಂತ್ರಣದಲ್ಲೆ ಇರುತ್ತದೆ. ಯೋಗಾಭ್ಯಾಸದೊಂದಿಗೆ ಆಹಾರ ಸೇವನೆಯ ಪದ್ಧತಿಯನ್ನು ಅನುಸರಿಸಬೇಕಾದ್ದು ಅತ್ಯವಶ್ಯವಾಗಿದೆ. ಇದರಿಂದ ಮಾತ್ರ ಯೋಗಾಭ್ಯಾಸದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗಲಿದೆ. ದೈಹಿಕ ಸಮಸ್ಯೆಗಳ ಪರಿಹಾರಕ್ಕೆ ಸೇವಿಸುವ ಬಹಳಷ್ಟು ಔಷಧಿಗಳು ದೇಹದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಆರೋಗ್ಯ ಮತ್ತಷ್ಟು ಹದಗೆಡುತ್ತದೆ. ಆದರೆ ಯೋಗಾಭ್ಯಾಸದಿಂದ ಸದೃಢವಾದ ದೇಹ, ಮಾನಸಿಕ ನೆಮ್ಮದಿ, ಅತ್ಯುತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ನಿರಂತರವಾಗಿ ಯೋಗಾಭ್ಯಾಸ ಮಾಡಿದಲ್ಲಿ ಮಾತ್ರ ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಲು ಸಾಧ್ಯ ಎಂಬುದನ್ನು ಎಲ್ಲರೂ ಅರಿಯಬೇಕು.
ಯೋಗ ಶಿಕ್ಷಣ ಸಮಿತಿಯು ಕೇವಲ ನಗರದ ವ್ಯಾಪ್ತಿಗೆ ಸೀಮಿತಗೊಳ್ಳದೆ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿಕೊಳ್ಳುತ್ತಿರುವುದು ಸ್ವಸ್ಥ್ಯ ಸಮಾಜ ನಿರ್ಮಾಣಕ್ಕೆ ನಾಂದಿಯಾಗಲಿದೆ ಎಂದರು.ಇಂದು ರಾಷ್ಟ್ರದಲ್ಲಿ ಹಿಂದೂಗಳ ಜನಸಂಖ್ಯೆ ದಿನೇ ದಿನೆ ಕಡಿಮೆಯಾಗುತ್ತಿದ್ದು ಭವಿಷ್ಯದಲ್ಲಿ ಇದರಿಂದ ತೀವ್ರವಾದ ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ. ಇದರಿಂದಾಗಿ ಹಿಂದೂಗಳ ಪ್ರತಿ ಕುಟುಂಬದಲ್ಲಿಯೂ ಕನಿಷ್ಠ ಎರಡು ಮಕ್ಕಳಿರುವಂತೆ ಗಮನಹರಿಸಬೇಕಾದ್ದು ಅತ್ಯವಶ್ಯವಾಗಿದೆ. ಇಷ್ಟೇ ಅಲ್ಲದೆ ಪೋಷಕರು ಮಕ್ಕಳಿಗೆ ಮಮ್ಮಿ, ಡ್ಯಾಡಿ ಪದಗಳ ಬಳಕೆಯಂತಹ ಪಾಶ್ಚಾತ್ಯ ಸಂಸ್ಕøತಿಯ ಅನುಕರಣೆ ಮಾಡದೆ ದೇಶೀಯ ಸಂಸ್ಕøತಿಯ ಬಗ್ಗೆ ಅಭಿಮಾನ ಹೊಂದಿ ಉಳಿಸಿ ಬೆಳೆಸಲು ಆದ್ಯತೆ ನೀಡಬೇಕು ಎಂದರು.
ವಿವೇಕಾನಂದ ವಿದ್ಯಾಕೇಂದ್ರದ ಕಾರ್ಯದರ್ಶಿ ನಾಗರಾಜ ಗುಪ್ತ ಮಾತನಾಡಿ ಶಾಲೆಯ ಆವರಣದಲ್ಲಿ ದಾನಿಗಳ ಸಹಕಾರದೊಂದಿಗೆ ಯೋಗ ಭವನ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಶಾಲೆಯಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ನೀಡಲಾಗುತ್ತಿದೆ. ಯೋಗಾಭ್ಯಾಸವು ಕಲಿಕೆಯಲ್ಲಿ ಏಕಾಗ್ರತೆ ಸಾಧಿಸಲು, ಸಮಾಜದಲ್ಲಿ ಸತ್ಪ್ರಜೆಗಳಾಗಿ ರೂಪುಗೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿದ್ದು ಶಾಲೆಯ ಎಸ್ಎಸ್ಎಲ್ಸಿ ಫಲಿತಾಂಶದ ಇದಕ್ಕೆ ಸಾಧನೆಯೇ ನಿದರ್ಶನವಾಗಿದೆ ಎಂದರು.
ವರದಿ ಮಂಡಿಸಿದ ವಿವೇಕಾನಂದ ಯೋಗಶಿಕ್ಷಣ ಸಮಿತಿಯ ಕಾರ್ಯದರ್ಶಿ ಬಿ.ಎಂ.ವೆಂಕಟೇಶ್ ಸಮಿತಿಯು ನಿಸ್ವಾರ್ಥವಾಗಿ ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ ಯೋಗವನ್ನು ಕಲಿಸಿಕೊಡುವ ಕಾರ್ಯ ದಶಕಗಳಿಂದ ಮಾಡುತ್ತಿದ್ದು, ದಾನಿಗಳ ಸಹಕಾರದೊಂದಿಗೆ ಯೋಗಭವನವನ್ನು ಸಹ ನಿರ್ಮಿಸಿಕೊಂಡಿದೆ.ಇದುವರೆವಿಗೂ 48 ದಿನಗಳ ಅವಧಿಯ 75 ಯೋಗ ತರಬೇತಿ ಶಿಬಿರಗಳನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಶಾಖೆಗಳ ಯೋಗಪಟುಗಳು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇಷ್ಟೇ ಅಲ್ಲದೆ ನಗರದ ಪ್ರಮುಖ ಬೀದಿಗಳಲ್ಲಿ ಯೋಗ ನಡಿಗೆ ಸಹ ಏರ್ಪಡಿಸುವ ಮೂಲಕ ಸಮಾಜದಲ್ಲಿ ಯೋಗದ ಬಗ್ಗೆ ಆಸಕ್ತಿ ಮೂಡಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮೇಲಿನಪೇಟೆ ಧರ್ಮರಾಯ ಶಾಖೆಯ ಮುಖ್ಯ ಶಿಕ್ಷಕ ರಾಮಚಂದ್ರರವರಿಗೆ ವಿಶ್ವ ಹಿಂದೂ ಪರಿಷತ್ ವತಿಯಿಂದ ರಾಜ್ಯ ಮಟ್ಟದ “ಸುಸಂಸ್ಕøತ ಯೋಗರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಯೋಗ ಶಿಕ್ಷಕ ತರಬೇತಿ ಪೂರ್ಣಗೊಳಿಸಿದ 48 ಯೋಗಪಟುಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.ವೇದಿಕೆಯ ಮೇಲೆ 9 ವಿವಿಧ ಭಂಗಿಗಳ ಯೋಗ ಗುಚ್ಛ ಕಾರ್ಯಕ್ರಮ ಸಹ ನಡೆಯಿತು.ವಿವೇಕಾನಂದ ಯೋಗಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಆರ್. ನಾಗರಾಜ್, ಉಪಾಧ್ಯಕ್ಷ ಆಂಜನಪ್ಪ, ಕಾರ್ಯಾಧ್ಯಕ್ಷ ಚಂದ್ರು, ವಿಶ್ವ ಹಿಂದೂ ಪರಿಷತ್ತಿನ ತಾಲೂಕು ಅಧ್ಯಕ್ಷ ಎಚ್.ಎಸ್.ಅನಿಲ್ಕುಮಾರ್, ನಗರ ಹಾಗೂ ತಾಲೂಕಿನ ಯೋಗ ಶಿಕ್ಷಣ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.