ಚಿಕ್ಕಬಳ್ಳಾಪುರ: ಬಾಬೂಜಿಯವರು ಒಬ್ಬ ಸಾಮಾನ್ಯ ವ್ಯಕ್ತಿ ಆಗಿರಲಿಲ್ಲ ಬಲಹೀನ ವರ್ಗಗಳ ಶಕ್ತಿ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ ಸುಧಾಕರ್ ಅವರು ಬಣ್ಣಿಸಿದರು.ಅವರು ಭಾನುವಾರ ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿಗಳಾದ ಡಾ. ಬಾಬು ಜಗಜೀವನ ರಾಮ್ರವರ 119 ನೇ ಜನ್ಮ ದಿನಾಚರಣೆಯ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೌತಮ ಬುದ್ಧರು ವಿಶ್ವಕ್ಕೆ ನೀಡಿದ ಸಾಮಾಜಿಕ ನ್ಯಾಯದ ಸಂದೇಶವನ್ನು ಇಡೀ ದೇಶಕ್ಕೆ ಪಸರಿಸಿದವರು ಜಗಜೀವನ್ ರಾಮ್.ಅವರು ಕಾರ್ಮಿಕರ ಕಲ್ಯಾಣಕ್ಕಾಗಿ ರೂಪಿಸಿದ ಯೋಜನೆಗಳು ಮತ್ತು ನಿಯಮಗಳು ಪ್ರಸ್ತುತವು ಸಹ ಚಾಲನೆಯಲ್ಲಿವೆ. ಆಹಾರ ಉತ್ಪನ್ನಗಳನ್ನು ದೇಶದ ರೈತರು ಇಂದು ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ ಎಂದರೆ ಅದರಲ್ಲಿ ಬಾಬೂಜಿ ಅವರ ಕಾಣಿಕೆ ಅಪಾರ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್ ರಮೇಶ್ ಅವರು ಮಾತನಾಡಿ ಶೋಷಿತ ವರ್ಗದಲ್ಲಿ ಜನಿಸಿ, ಸ್ವಾತಂತ್ರ÷್ಯ ಚಳುವಳಿಯಲ್ಲಿ ಭಾಗವಹಿಸಿ, ದೇಶದ ಆರ್ಥಿಕ-ಸಾಮಾಜಿಕ ಸುಧಾರಕರಾಗಿ, ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ಸುದೀರ್ಘವಾಗಿ ತೊಡಗಿಸಿಕೊಂಡು, ದೇಶ ಕಟ್ಟಿದ ಅಪ್ರತಿಮ ನಾಯಕರು ಡಾ. ಬಾಬು ಜಗಜೀವನ ರಾಮ್.ಬಾಲ್ಯದಲ್ಲಿ ಬಡತನ, ಶೋಷಣೆ ಅನುಭವಿಸಿದ್ದ ಅವರು ಶೋಷಣೆ ವಿರುದ್ಧ ಹೋರಾಟ ನಡೆಸಿ ವಿದ್ಯಾಭ್ಯಾಸ ಪಡೆದ ಮಹಾನ್ ವ್ಯಕ್ತಿ. ತಮ್ಮ ಸುದೀರ್ಘ ರಾಜಕೀಯ ಜೀವನವನ್ನು ಹೊಂದಿರುವ ಅವರು ಇಂಡೋ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ ಪ್ರಭು ಅವರು ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಜಗಜೀವನ್ ರಾಮ್ ಅವರು ನಮ್ಮ ದೇಶದ ಎರಡು ಕಣ್ಣುಗಳು ಇದ್ದ ಹಾಗೆ,ಅವರ ನಡೆ-ನುಡಿ ಹಾಗೂ ಅವರ ಸಾಧನೆಗಳು ಸದಾ ಆದರ್ಶ ಪ್ರಾಯವಾದವುಗಳು. ಬಾಬೂಜಿಯವರು ಮಹಾತ್ಮ ಗಾಂಧಿ ಹಾಗೂ ಮದನ್ ಮೋಹನ್ ಮಾಳವಿಯಾ ಅವರಿಂದ ಪ್ರೇರಣೆಗೊಂಡು ಅನೇಕ ಸಂಘಟನೆಗಳನ್ನು ಹುಟ್ಟುಹಾಕಿದರಲ್ಲದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ತಮ್ಮನ್ನು ತಾವು ದೇಶದ ಸೇವೆಗೆ ಅರ್ಪಿಸಿಕೊಂಡವರು, ಅಸ್ಪೃಶ್ಯತೆ ಮತ್ತು ಅಸಮಾನತೆ ವಿರುದ್ಧ ಹೋರಾಡಿದ್ದಕ್ಕಾಗಿ ಇವರ ಜನ್ಮದಿನವನ್ನು “ಸಮಾನತೆಯ ದಿನ”ವನ್ನಾಗಿ ಆಚರಿಸಲಾಗುತ್ತದೆ ಇಂತಹ ಮಹಾನ್ ನಾಯಕರ ಜಯಂತಿಯನ್ನು ಕೇವಲ ಆಚರಣೆಗೆ ಮಾತ್ರ ಸೀಮಿತಗೊಳಿಸದೆ. ಅವರು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ನಡೆದು ಸಹಬಾಳ್ವೆ ಸಹೋದರತ್ವ ಹಾಗೂ ಸಾಮರಸ್ಯದ ಅಂಶಗಳನ್ನು ಅಳವಡಿಸಿಕೊಂಡು ಪಾಲಿಸಬೇಕು ಎಂದು ತಿಳಿಸಿದರು.
ಬೆಂಗಳೂರು ಮಾತಂಗ ಫೌಂಡೇಶನ್ ಅಧ್ಯಕ್ಷ ಆರ್ ಲೋಕೇಶ್ ಅವರು ಡಾ. ಬಾಬು ಜಗಜೀವನ ರಾಮ್ ಅವರ ಹೋರಾಟದ ಜೀವನ, ರಾಜಕೀಯ ಬದುಕು, ದೇಶಕ್ಕೆ ಅವರ ಕೊಡುಗೆಗಳ ಕುರಿತು ಉಪನ್ಯಾಸ ನೀಡಿದರು.
2024-25 ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ವಾಪಸಂದ್ರದ ಶ್ರೀ ರಂಗನಾಥಸ್ವಾಮಿ ದೇವಾಲಯದ ಮುಂಭಾಗದಿAದ ಡಾ. ಬಾಬು ಜಗಜೀವನ ರಾಮ್ ರವರ ಭಾವಚಿತ್ರಗಳ ಪಲ್ಲಕ್ಕಿ, ಸ್ತಬ್ದ ಚಿತ್ರಗಳು ಹಾಗೂ ತಮಟೆ ವಾದ್ಯಗಳೊಂದಿಗೆ ಅದ್ದೂರಿ ಮೆರವಣಿಗೆ ಕಾರ್ಯಕ್ರಮ ಆರಂಭವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ (ಶಿಡ್ಲಘಟ್ಟ ಸರ್ಕಲ್) ಮುಖಾಂತರ ಕನ್ನಡ ಭವನದ ವರೆಗೆ ಸಾಗಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಗಮದ ಅಧ್ಯಕ್ಷ ಬಿ ಜಿ ಗಣೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕುಶಲ್ ಚೌಕ್ಸೆ ಅಪರ ಜಿಲ್ಲಾಧಿಕಾರಿ ಡಾ. ಭಾಸ್ಕರ್, ಉಪವಿಭಾಗಾಧಿಕಾರಿ ಡಿ ಎಚ್ ಅಶ್ವಿನ್,ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಷಾ,ಮಾಜಿ ಶಾಸಕರಾದ ಮುನಿಯಪ್ಪ, ಅನುಸೂಯಮ್ಮ, ತಹಸಿಲ್ದಾರ್ ರಶ್ಮಿ, ನಗರ ಸಭೆ ಸದಸ್ಯರು, ಸಮುದಾಯದ ಮುಖಂಡರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ದಲಿತ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ಬಲಹೀನ ವರ್ಗಗಳ ಶಕ್ತಿಯೇ ಜಗಜೀವನ್ ರಾಮ್: ಸಂಸದ ಕೆ.ಸುಧಾಕರ್ ಬಣ್ಣನೆ



