ಅಯೋದ್ಯೆ: ಕೋಟ್ಯಂತರ ಭಾರತೀಯರ ಬಹುವರ್ಷಗಳ ಅಪೇಕ್ಷೆಯಾಗಿದ್ದ ರಾಮಮಂದಿರ ನಿರ್ಮಾಣದ ಕನಸು ಇಂದು ನೆರವೇರಿದೆ.
ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಇಂದು ಉದ್ಘಾಟನೆಯಾಗಿದ್ದು, ಲಕ್ಷಾಂತರ ಭಕ್ತರ `ಜೈ ಶ್ರೀರಾಮ್’ ಘೋಷಣೆಯೊಂದಿಗೆ ಬಾಲರಾಮನ ಪ್ರಾಣಪ್ರತಿಷ್ಠಾಪನೆಯು ನೆರವೇರಿತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರದ ವಿವಿಧೆಡೆಯಿಂದ ಆಗಮಿಸಿದ್ದ ವಿವಿಧ ಮಠಾಧೀಶರು, ಸಾಧುಸಂತರು, ರಾಜಕೀಯ ಸೇರಿದಂತೆ ಕ್ರೀಡಾ ಹಾಗೂ ಚಲನಚಿತ್ರ ಕ್ಷೇತ್ರದ ಗಣ್ಯರು, ಐತಿಹಾಸಿಕ ಸಮಾಂರಭಕ್ಕೆ ಸಾಕ್ಷಿಯಾದರು.
ಇಂದು ಬೆಳಿಗ್ಗೆ ದೆಹಲಿಯಿಂದ 10.30ರ ಸುಮಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಅಯೋಧ್ಯೆಗೆ ಆಗಮಿಸಿ ಪ್ರಾಣಪ್ರತಿಷ್ಠಾಪನಾ ವಿಧಿವಿಧಾನ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಮೋದಿಯವರೊಂದಿಗೆ ಉತ್ತರಪ್ರದೇಶದ ರಾಜ್ಯಪಾಲೆ ಆನಂದಿಬೆನ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೋಹನ್ ಭಾಗವತ್, ಪೇಜಾವರಮಠದ ಶ್ರೀಗಳು ಪಾಲ್ಗೊಂಡರು. ನಿಗಧಿಯಾಗಿದ್ದ ಸಮಯಕ್ಕೆ ಸರಿಯಾಗಿ ಬಾಲರಾಮನ ಪ್ರತಿಷ್ಠಾಪನಾಕಾರ್ಯ ಮಂತ್ರ ಘೋಷ ಸೇರಿದಂತೆ ಘಂಟಾನಾದ, ಶಂಖನಾದೊಂದಿಗೆ ನೆರವೇರಿತು. ಈ ಸಂದರ್ಭದಲ್ಲಿ ದೇವಾಲಯದ ಗೋಪುರಕ್ಕೆ ಹೆಲಿಕಾಪ್ಟರ್ನಲ್ಲಿ ಪುಷ್ಪಾರ್ಚನೆಯನ್ನು ಮಾಡಲಾಯಿತು.ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಭಕ್ತಸಮೂಹ ರಾಮನಾಮ ಸ್ಮರಣೆಯಲ್ಲಿ ಮಿಂದೆದ್ದರು.