ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಭಾಗವು ಇಂದು ಆರಂಭಗೊAಡಿದ್ದು, ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ ಸರಬರಾಜು ಸರಪಳಿ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ಎಚ್ಚರಿಸಿದ್ದಾರೆ.
ಯುದ್ಧದ ಕಾರಣದಿಂದಾಗಿ ಸಮುದ್ರ ಮಾರ್ಗದ ಸಾಗಾಟ ಮತ್ತು ಅಂತರಾಷ್ಟ್ರೀಯ ವ್ಯಾಪಾರಕ್ಕೆ ಭಾರಿ ಅಡೆತಡೆ ಉಂಟಾಗಿದೆ. ಇದು ಕೇವಲ ಒಂದು ಪ್ರಾದೇಶಿಕ ಬಿಕ್ಕಟ್ಟಲ್ಲ, ಬದಲಿಗೆ ಜಾಗತಿಕ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವ ವಿಷಯವಾಗಿದೆ. ವಿಶೇಷವಾಗಿ ಇಂಧನ ಮತ್ತು ಆಹಾರ ಪದಾರ್ಥಗಳ ಸರಬರಾಜು ಸರಪಳಿಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದು ಗಂಭೀರ ಆತಂಕದ ವಿಷಯ ಎಂದು ಸಚಿವರು ವಿವರಿಸಿದರು.
ಪಶ್ಚಿಮ ಏಷ್ಯಾದ ವಿವಿಧ ದೇಶಗಳಲ್ಲಿ ವಾಸಿಸುತ್ತಿರುವ ಸುಮಾರು ೯೦ ಲಕ್ಷಕ್ಕೂ ಹೆಚ್ಚು ಭಾರತೀಯರ ಸುರಕ್ಷತೆಯೇ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಈಗಾಗಲೇ ೫೨,೦೦೦ ಕ್ಕೂ ಹೆಚ್ಚು ಭಾರತೀಯರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಅಗತ್ಯವಿದ್ದಲ್ಲಿ ಹೆಚ್ಚಿನ ಜನರನ್ನು ಸ್ಥಳಾಂತರಿಸಲು `ಆಪರೇಷನ್ ಅಜಯ್’ ಮಾದರಿಯ ಬೃಹತ್ ಕಾರ್ಯಾಚರಣೆಗೆ ಸರ್ಕಾರ ಸಿದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.
ಪರಿಸ್ಥಿತಿಯು ಕೈಮೀರಿ ಹೋಗದಂತೆ ತಡೆಯಲು ಭಾರತವು ಎಲ್ಲಾ ದೇಶಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. “ಯುದ್ಧವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ” ಎಂಬ ಭಾರತದ ಸ್ಪಷ್ಟ ನಿಲುವನ್ನು ಅವರು ಪುನರುಚ್ಚರಿಸಿದರು. ಪ್ರಧಾನಿ ಮೋದಿ ಅವರು ಗಲ್ಫ್ ರಾಷ್ಟ್ರಗಳ ನಾಯಕರೊಂದಿಗೆ ವೈಯಕ್ತಿಕವಾಗಿ ಚರ್ಚಿಸಿ ಅಲ್ಲಿರುವ ಭಾರತೀಯರ ಹಿತರಕ್ಷಣೆಗೆ ಒತ್ತು ನೀಡಿದ್ದಾರೆ ಎಂದು ತಿಳಿಸಿದರು.
ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತವು ತನ್ನ ಇಂಧನ ಅಗತ್ಯಗಳಿಗಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ.
ಇಸ್ರೇಲ್-ಇರಾನ್ ಯುದ್ಧ ಹಿನ್ನೆಲೆ ಜಾಗತಿಕ ಸರಬರಾಜು ಸರಪಳಿ ತೀವ್ರ ಅಸ್ತವ್ಯಸ್ತಗೊಂಡಿದೆ: ಜೈಶಂಕರ್



