ದೊಡ್ಡಬಳ್ಳಾಪುರ: ಜನರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಜಾನುವಾರುಗಳಿಗಾಗಿ ಕುಡಿಯುವ ನೀರಿಗಾಗಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಡಿಸಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರಿಗೆ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣೆ ವೇದಿಕೆಯ ಮುಖಂಡರು ಮನವಿ ಸಲ್ಲಿಸಿದರು.
ತಾಲ್ಲೂಕಿನ ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿಗಳ ಕೊಳವೆ ಬಾವಿ, ಕೆರೆ ಸೇರಿದಂತೆ ಶುದ್ಧ ಕುಡಿಯುವ ಘಟಕದ ನೀರು ಸಹ ಕಲುಷಿತಗೊಂಡಿದ್ದು ಪರ್ಯಾಯ ನೀರಿನ ವ್ಯವಸ್ಥೆಗಾಗಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಡಿಸಿ ಕೊಡಿ ಎಂದು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ವೇದಿಕೆಯ ಮುಖಂಡ ವಸಂತ್ ಕುಮಾರ್ ಅವರು 2021ರ ಕೊಳವೆ ಬಾವಿಗಳ ನೀರಿನ ಪರೀಕ್ಷಾ ವರದಿಯಲ್ಲಿ 18 ಕೊಳವೆ ಬಾವಿಗಳಲ್ಲಿ 07 ಕೊಳವೆ ಬಾವಿಗಳು ಹಾಗೂ 2023 ನೇ ಇಸವಿಯಲ್ಲಿ 18 ಕೊಳವೆ ಬಾವಿಗಳಲ್ಲಿ 17 ಕೊಳವೆ ಬಾವಿಗಳಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ. ಇಂದು ಕುಡಿಯಲು ಜಕ್ಕಲಮಡಗು ನೀರನ್ನು ಕೊಡುತ್ತಿದ್ದಾರೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕಲುಷಿತಗೊಂಡಿರುವ ನೀರನ್ನು ನಮಗೆ ಮತ್ತು ದನಕರುಗಳಿಗೆ ಉಪಯೋಗಿಸಲು ಕೊಡುತ್ತಿದೆ, ಜಲ ಜೀವನ್ ಯೋಜನೆಯು ಶುದ್ಧ ಕುಡಿಯುವ ನೀರು ಕೊಡಬೇಕೆಂದು ಹೇಳುತ್ತದೆ ಆದರೆ ಪ್ರತಿ ಮನೆಗೆ ಜೀವಜಲ ಎಂಬ ಯೋಜನೆ ನಮ್ಮ ಗ್ರಾಮಗಳ ಪಾಲಿಗೆ ಜೀವ ಹಿಂಡವಂತೆ ಮಾಡುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಈ ಹಿಂದೆ ಅಧಿಕಾರಿಗಳ ತಂಡ ಪಕ್ಕದ ಪಂಚಾಯಿತಿಯ ನರಸಯ್ಯನ ಅಗ್ರಹಾರದಿಂದ ನೀರು ತಂದು ಕೊಡುತ್ತೇವೆ ಎಂದು ಕೆರೆ ಹೋರಾಟಗಾರರಿಗೆ ಭರವಸೆ ನೀಡಿದ್ದರು. ಆದರೆ ನರಸಯ್ಯನ ಅಗ್ರಹಾರದಿಂದ ನೀರು ತರಲು ಯಾವುದೇ ಕ್ರಮ ತೆಗೆದುಕೊಳ್ಳದೇ ಕಲುಷಿತಗೊಂಡಿರುವ ನೀರನ್ನು ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ಪಂಚಾಯಿತಿಗಳ ಅಂತರ್ಜಲವು ಅಧಿಕ ಲೋಹಗಳಾದ ಸೀಸ, ಲೇಟ್, ಕ್ರೋಮಿಯಂ ಸೇರಿದಂತೆ ಅನೇಕ ವಿಷಯುಕ್ತ ರಾಸಾಯನಿಕಗಳು ಇರುವುದು ಕಂಡು ಬಂದಿದೆ, ಜನಗಳ ಆರೋಗ್ಯ ದೃಷ್ಟಿಯಿಂದ ಜಾನುವಾರು, ಪ್ರಾಣಿ, ಪಕ್ಷಿ, ಜೀವ ಸಂಕುಲಗಳ ಉಳಿವಿಗಾಗಿ ಎರಡೂ ಗ್ರಾಮ ಪಂಚಾಯತಿಯ ಪ್ರತಿಯೊಂದು ಮನೆಗೂ ಕುಡಿಯುವ ನೀರಿನ “ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಡುವ ಮೂಲಕ ಶುದ್ಧ ಕುಡಿಯುವ ನೀರನ್ನು ಕೊಡಬೇಕೆಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದೊಡ್ಡತುಮಕೂರು ಮುಖಂಡ ರಾಮಕೃಷ್ಣ ಸೇರಿದಂತೆ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣೆ ವೇದಿಕೆಯ ಮುಖಂಡರು ಉಪಸ್ಥಿತರಿದ್ದರು.