ವೈನಾಡ್: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇರಳ ಪ್ರವಾಸದಲ್ಲಿರುವ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್, ಮೊದಲಿಗೆ ರಾಹುಲ್ ಗಾಂಧಿ ಸ್ಪರ್ಧೆ ಮಾಡಿರುವ ವೈನಾಡ್ ಪ್ರವೇಶ ಮಾಡುತ್ತಿದ್ದಂತೆ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಮುಸ್ಲಿಂ ಯತೀಮ್ ಕಾನಾಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಈ ಶಿಕ್ಷಣ ಸಂಸ್ಥೆಯಲ್ಲಿ ಕೇರಳ ಅಷ್ಟೇ ಅಲ್ಲದೆ ಗುಜರಾತ್ ಸೇರಿದಂತೆ ದೇಶದ ವಿವಿದೆಡೆ ಯಿಂದ ಬಡ ಕುಟುಂಬಗಳ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ವ್ಯಾಸಂಗ ಮಾಡಿದ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವುದು ಸಂತೋಷದ ಸಂಗತಿ.
ಶಿಕ್ಷಣ ಪ್ರಬಲ ಅಸ್ತ್ರ, ಬಡ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದು ಪುಣ್ಯದ ಕೆಲಸ.
ಇಂತಹ ಕಾರ್ಯದಲ್ಲಿ ತೊಡಗಿರುವ ಸಂಸ್ಥೆ ಯ ಕಾರ್ಯ ಶ್ಲಾಘನೀಯ. ಈ ಸಂಸ್ಥೆ ಈ ಮಟ್ಟಕ್ಕೆ ಏರಲು ಜಮಾಲ್ ಸಾಹೇಬರು ಸಾಕಷ್ಟು ಶ್ರಮ ಹಾಕಿದ್ದಾರೆ. ಕರ್ನಾಟಕ ದ ಗುಂಡ್ಲುಪೇಟೆ ಯಲ್ಲಿ ಇಂತದ್ದೇ ಸಂಸ್ಥೆ ಪ್ರಾರಂಭಿಸುವ ಅವರ ಕನಸು ನನಸು ಮಾಡಲು ನಾನು ಜತೆಗೂಡುತ್ತೇನೆ ಎಂದು ಹೇಳಿದರು.
ವೈನಾಡಿನಲ್ಲಿ ರಾಹುಲ್ ಗಾಂಧಿ ಅವರು ಸ್ಪರ್ಧೆ ಮಾಡುತ್ತಿರುವುದು ಇಲ್ಲಿನ ಜನರ ಪುಣ್ಯ. ರಾಹುಲ್ ಗಾಂಧಿ ಈ ದೇಶದ ಪ್ರಧಾನಿ ಆಗುವುದು ಯಾರಿಂದಲೂ ತಪ್ಪಿಸುವುದು ಸಾಧ್ಯವಿಲ್ಲ ಎಂದು ಹೇಳಿದರು.
ಕಳೆದ ಬಾರಿ ರಾಹುಲ್ ಗಾಂಧಿ ಅವರು ಐದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಆರು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿ ಎಂದು ತಿಳಿಸಿದರು. ಇದಕ್ಕೂ ಮುನ್ನ ಸಂಸ್ಥೆಯ ಮುಖ್ಯಸ್ಥರು ಸ್ವಾಗತ ಕೋರಿ ಸನ್ಮಾನಿಸಿದರು.
ವೈನಾಡ್ ಯುಡಿ ಎಫ್ ಅಧ್ಯಕ್ಷ ಕೆಕೆ ಅಹಮದ್ ಹಾಜಿ, ಮೌಲಾನಾ ಶಾಫಿ ಸಾದಿ, ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಸದಸ್ಯ ಯಾಕೊಬ್, ವಿಷನ್ ಗ್ರೂಪ್ ಅಧ್ಯಕ್ಷ ನೌಫಲ್ ಮತ್ತಿತರರು ಉಪಸ್ಥಿತರಿದ್ದರು.