ಭಾರತೀಯ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಮಾರಕ ವೇಗದ ಬೌಲಿಂಗ್ ಗೆ ತತ್ತರಿಸಿದ ಟೆಸ್ಟ್ ವಿಶ್ವಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡ ಪ್ರಥಮ ಟೆಸ್ಟ್ ನ ಪ್ರಧಮ ಇನ್ನಿಂಗ್ಸ್ ನಲ್ಲಿ ಸಾಧಾರಣ ಮೊತ್ತಕ್ಕೆ ಸರ್ವಪತನ ಕಂಡಿದೆ. ಆದರೆ ಬುಮ್ರಾ ಅವರ ಬೌಲಿಂಗ್ ಪ್ರದರ್ಶನಕ್ಕಿಂತ ಹೆಚ್ಚಾಗಿ, ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಅವರನ್ನು ಕಟಕಿಯಾಡಿರುವ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಶುಕ್ರವಾರ ಪ್ರಾರಂಭ ಆಗಿರುವ ಪ್ರಥಮ ಟೆಸ್ಟ್
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿತು. ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಬಿಗು ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕಾ ತಂಡ ೫೫ ಓವರ್ ಗಳಲ್ಲಿ ೧೫೯ಕ್ಕೆ ಆಲೌಟ್ ಆಯಿತು.
ದಕ್ಷಿಣ ಆಫ್ರಿಕಾದ ಆರಂಭಿಕರಾದ ಐಡನ್ ಮಾರ್ಕಂ ಮತ್ತು ರಿಯಾನ್ ರಿಕೆಲ್ಟನ್ ಅವರು ಮೊದಲ ವಿಕೆಟ್ ಗೆ ೫೭ ರನ್ ಗಳ ಜೊತೆಯಾಟವಾಡಿದರು. ಈ ವೇಳೆ ದಕ್ಷಿಣ ಆಫ್ರಿಕಾ
ಬೃಹತ್ ಮೊತ್ತವೊಂದನ್ನು ಪೇರಿಸುವ ಸೂಚನೆ ನೀಡಿದ್ದರು. ಆರಂಭಿಕರಾದ ಮಾರ್ಕ್ಂ(೩೧), ರಿಕಲ್ಟನ್(೨೩) ಮತ್ತು ನಾಯಕ ಬುವಾಮಾ(೩) ಅವರ ವಿಕೆಟ್ ಉರುಳಿಸಿದರು.
ಈ ಆಘಾತದಿಂದ ದಕ್ಷಿಣ ಆಫ್ರಿಕಾ ತಂಡ ಚೇತರಿಸಿಕೊಳ್ಳಲೇ ಇಲ್ಲ. ಮಧ್ಯಮ ಕ್ರಮಾಂಕದಲ್ಲಿ ಜಾರ್ಝಿ(೨೪), ಸ್ಟಬ್ಸ್ (೧೫), ವೆರೆನ್ನೆ(೧೬) ರನ್ ಗಳಿಸಿ ಕೆಲಕಾಲ ಕ್ರೀಸಿನಲ್ಲಿ ತಳವೂರಲು ಪ್ರಯತ್ನಿಸಿದರಾದರೂ ತಂಡವನ್ನು ದೊಡ್ಡ ಮೊತ್ತದೆಡೆಗೆ ಕೊಂಡೊಯ್ಯುವಲ್ಲಿ ಸಫಲರಾಗಲಿಲ್ಲ. ಹೀಗಾಗಿ ತಂಡ ೧೫೯ ರನ್ ಗೆ ಆಲೌಟ್ ಆಯಿತು. ಜಸ್ಪ್ರೀತ್ ಬುಮ್ರಾ ೫ ವಿಕೆಟ್ ಪಡೆದರೆ, ಸಿರಾಜ್ ಮತ್ತು ಕುಲ್ದೀಪ್ ಯಾದವ್ ತಲಾ ೨ ವಿಕೆಟ್ ಗಳಿಸಿದರು. ಮತ್ತೊಂದು ವಿಕೆಟ್ ಅಕ್ಷರ್ ಪಟೇಲ್ ಪಾಲಾಯಿತು.
ಟೆಂಬಾ ಬವುಮಾ ಅವರನ್ನು ಬುಮ್ರಾ ಅವರು ಎಲ್’ಬಿ’ (ಲೆಗ್ ಬಿಫೋರ್ ವಿಕೆಟ್) ಔಟ್ ಮಾಡಿದ್ದಾಗಿ ಅಂಪೈರ್ಗೆ ಮನವಿ ಮಾಡಿದರು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಆಗ ಬುಮ್ರಾ
ಮತ್ತು ವಿಕೆಟ್ ಕೀಪರ್ ರಿಷಬ್ ಪಂತ್ ನಡುವೆ ಡಿಆರ್ಎಸ್ ತೆಗೆದುಕೊಳ್ಳಬೇಕೇ ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯಿತು. ಈ ಚರ್ಚೆಯ ವೇಳೆ ಬುಮ್ರಾ ಅಥವಾ ಪಂತ್
ಅವರಲ್ಲಿ ಯಾರೋ ಒಬ್ಬರು ಬವುಮಾ ಅವರನ್ನು “ಬೌನಾ” (ಕುಬ್ಜ) ಎಂದು ಕರೆದಿದ್ದಾರೆ ಎನ್ನಲಾಗಿದೆ. ಈ ಮಾತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು.



