ಜಸ್ಪ್ರೀತ್ ಬುಮ್ರಾ ಅವರಿಗೆ ಕಾರ್ಯದೊತ್ತಡ ನಿರ್ವಹಣೆ ವಿಚಾರ ಮುಂದಿಟ್ಟುಕೊಂಡು ವಿಶ್ರಾಂತಿ ಅಗತ್ಯವೇ ಎಂಬ ಪ್ರಶ್ನೆಯ ಮಧ್ಯೆಯೇ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಅವರನ್ನು ಯಾಕೆ ಆಡಿಸಿಲ್ಲ ಎಂಬ ಪ್ರಶ್ನೆಯೂ ಇದೀಗ ಹುಟ್ಟಿಕೊಂಡಿದೆ. ಪರ್ತ್ ನಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದ ಬಳಿಕವಂತೂ
ಈ ಚರ್ಚೆ ಮತ್ತಷ್ಟು ಹೆಚ್ಚಾಗಿದೆ. ವೇಗ ಮತ್ತು ಬೌನ್ಸ್ ಗೆ ಹೆಸರಾಗಿರುವ ಆಸೀಸ್ ಪಿಚ್ ಗಳಲ್ಲಿ ಅವರಿದ್ದಿದ್ದರೆ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ೭ ವಿಕೆಟ್ ಗಳಿಂದ ಸೋಲೊಪ್ಪಿಕೊಂಡಿತಷ್ಟೇ. ವೇಗದ ಬೌಲಿಂಗ್ ಗೆ ನೆರವು ನೀಡುತ್ತಿದ್ದ ಪಿಚ್ ಗಳಲ್ಲಿ ಆಸ್ಟ್ರೇಲಿಯಾ ವೇಗದ ಬೌಲರ್ ಗಳು ಭಾರತದ ಬ್ಯಾಟರ್ ಗಳನ್ನು ಪರದಾಡುವಂತೆ ಮಾಡಿದರು. ಅದೇ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಭಾರತದ ಬೌಲರ್ ಗಳು ಅದೇ ರೀತಿಯ ಪರಿಣಾಮ ಬೀರುವಲ್ಲಿ ಸಫಲರಾಗದ್ದರಿಂದ ಆಸೀಸ್ ಬ್ಯಾಟರ್ ಗಳು ಸಲೀಸಾಗಿ ತಂಡವನ್ನು ದಡ ತಲುಪಿಸಿದರು. ಈ ಹಂತದಲ್ಲಿ ಜಸ್ಪ್ರೀತ್ ಬುಮ್ರಾ ಇದ್ದಿದ್ದರೆ ಆಸ್ಟ್ರೇಲಿಯಾಗೆ ಈ ಗುರಿ ತಲುವುದು ಸುಲಭವಾಗುತ್ತಿರಲಿಲ್ಲ.
ಬುಮ್ರಾ ಬಗ್ಗೆ ಆತಂಕ ಆಸೀಸ್ ಗೆ ಇದ್ದೇ ಇರುತ್ತಿತ್ತು. ಜೊತೆಗೆ ಉಳಿದ ಬೌಲರ್ ಗಳೂ ಲಯ ಕಂಡುಕೊಳ್ಳಬಹುದಿತ್ತು ಎಂದು ಕ್ರಿಕೆಟ್ ತಜ್ಞು ಅಭಿಪ್ರಾಯಪಟ್ಟಿದ್ದಾರೆ. ಬೌಲಿಂಗ್ ಸ್ನೇಹಿ ಪಿಚ್ ತಯಾರಿ ಆಸ್ಟ್ರೇಲಿಯಾ ಇತ್ತೀಚಿನ ವರ್ಷಗಳಲ್ಲಿ ವೇಗದ ಬೌಲಿಂಗ್ ಮತ್ತು ಬೌನ್ಸಿಗೆ ನೆರವು ನೀಡುವ ಪಿಚ್ ಗಳನ್ನೇ ಹೆಚ್ಚು ಸಿದ್ಧಪಡಿಸುತ್ತಿದೆ. ೨೦೨೪ರ ಪಾಕಿಸ್ತಾನ ಪ್ರವಾಸ ನಡೆಸಿದ್ದಾಗ ಇದು ಮೊದಲ ಬಾರಿಗೆ ಸ್ಪಷ್ಟವಾಗಿ ಗೇ?ಚರಿಸಿತ್ತು. ಈ ಸರಣಿಯಲ್ಲಿ ಅತ್ಯಧಿಕ ತಂಡದ ಮೊತ್ತವೇ ೨೦೪ ಆಗಿತ್ತು. ಹೀಗಾಗಿ ಪರ್ತ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವಲ್ಲಿ ಭಾರತ ತಂಡವೂ ವಿಫಲವಾಗಿದೆ ಎಂದು ಹೇಳದೇ ವಿಧಿಯಿಲ್ಲ.
ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ ಉತ್ತಮ ಬೌಲರ್ಗಳಾಗಿದ್ದರೂ, ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬುಮ್ರಾ ಅವರ ಗುಣಮಟ್ಟಕ್ಕೆ ಸರಿಸಮಾನರಲ್ಲ. ಜಸ್ಪ್ರೀತ್ ಬುಮ್ರಾ ತಂಡದಲ್ಲಿದ್ದರೆ ಪರಿಸ್ಥಿತಿ ಸಂಪೂರ್ಣ ಬದಲಾಗಿಬಿಡುತ್ತದೆ. ಎದುರಾಳಿ ತಂಡವೂ ಅವರನ್ನು ಎದುರಿಸುವ
ಒತ್ತಡಕ್ಕೆ ಒಳಗಾಗುತ್ತದೆ. ಆರಂಭದಲ್ಲೇ ಅವರು ಎದುರಾಳಿಗಳ ವಿಕೆಟ್ ಕೀಳಲು ಸಫಲರಾದರೆ ಅರ್ಧ ಪಂದ್ಯ ಗೆದ್ದಂತೆ. ಇಂತಹ ಸಂದರ್ಭದಲ್ಲಿ
ಬುಮ್ರಾ ಅವರ ಉಪಸ್ಥಿತಿ ಅತ್ಯಗತ್ಯವಾಗಿತ್ತು. ಆದರೆ ಬುಮ್ರಾ ಇಲ್ಲದ್ದನ್ನು ಆಸೀಸ್ ಸಮರ್ಥವಾಗಿ ಬಳಸಿಕೊಂಡು ಭಾರತದ ಮೇಲೆ ಒತ್ತಡ
ಹೇರುವಲ್ಲಿ ಸಫಲರಾದರು. ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಗೆ ಬುಮ್ರಾ ಅವರಿಗೆ ವಿಶ್ರಾಂತಿ ಕೊಟ್ಟರೂ ನಡೆಯುತ್ತಿತ್ತು. ಅಲ್ಲದೆ ಅವರು
ತೀವ್ರವಾದ ಬಿಸಿಲಿನಲ್ಲಿ ಎರಡು ಟೆಸ್ಟ್ಗಳಲ್ಲಿ ೫೨ ಓವರ್ಗಳನ್ನು ಬೌಲ್ ಮಾಡಿದ್ದರು.