ಬೆಂಗಳೂರು: ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ಗೆ ಆಯ್ಕೆಯಾಗಲು ದೇಶದ ಪ್ರಮುಖ ಅಥ್ಲೀಟ್ಗಳು ಮಂಗಳವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಗ್ರ್ಯಾನ್ ಪ್ರಿ ಮೊದಲ ಲೆಗ್ನಲ್ಲಿ ಸಾಮರ್ಥ್ಯ ಪ್ರದರ್ಶಿಸಿದರು. ಆದರೆ ಒಲಿಂಪಿಕ್ಸ್ ಅರ್ಹತಾ ಮಟ್ಟದ ಗುರಿ ತಲುಪುವಲ್ಲಿ ವಿಫಲರಾದರು.
ತವರಿನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದ ಕರ್ನಾಟಕದ ಜಾವೆಲಿನ್ ಥ್ರೋ ಸ್ಪರ್ಧಿ ಮನು ಅವರು 81.91 ಮೀಟರ್ ಎಸೆದು ಪ್ರಥಮ ಸ್ಥಾನ ಪಡೆದರು. ಆದರೆ ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಗಿಂತ (84.35 ಮೀ.) ಬಹಳ ಹಿಂದೆಯಿತ್ತು.
ಒಲಿಂಪಿಕ್ಸ್ ಅರ್ಹತಾ ಮಟ್ಟ 85.50 ಮೀ. ಎಂದು ನಿಗದಿ ಪಡಿಸಲಾಗಿತ್ತು. ಮಹಾರಾಷ್ಟ್ರದ ಉತ್ತಮ್ ಬಾಳಾಸಾಹೇಬ್ ಪಾಟೀಲ್ (76.81 ಮೀ) ಹಾಗೂ ಉತ್ತರ ಪ್ರದೇಶದ ವಿಕಾಸ್ ಯಾದವ್ (75.99 ಮೀ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.