ಮೈಸೂರು: ಜೆಡಿಎಸ್ ಪಕ್ಷದ 18 ಶಾಸಕರು ಒಗ್ಗಟ್ಟಿನಿಂದ ಇದ್ದು, ಯಾವುದೇ ಕಾರಣಕ್ಕೂ ಪಕ್ಷ ತೊರೆಯಲ್ಲ ಎಂದು ಹುಣಸೂರು ಶಾಸಕ ಜಿ ಡಿ ಹರೀಶ್ಗೌಡ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ 18 ಶಾಸಕರು ಒಗ್ಗಟ್ಟಾಗಿದ್ದು, ಪಕ್ಷ ತೊರೆಯುವ ಯಾವುದೇ ಉದ್ದೇಶವಿಲ್ಲ. 140 ಕ್ಷೇತ್ರಗಳಲ್ಲಿ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಮೇಲೆ ಕಣ್ಣಿದೆ. ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಬಲಿಷ್ಟವಾಗಿದೆ. ಕೇಂದ್ರದಲ್ಲಿ ಕುಮಾರಸ್ವಾಮಿಯವರು ಸಚಿವರಾಗಿದ್ದಾರೆ. ಆದ್ದರಿಂದ ನಮ್ಮ ಯಾವುದೇ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಕ್ಷವನ್ನು ಕಟ್ಟುತ್ತೇವೆ. ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಸಾಮಾನ್ಯ ಮಾತುಕತೆ ವೇಳೆ ಪಕ್ಷಕ್ಕೆ ಸೇರ್ಪಡೆಯಾಗುವ ಕುರಿತು ಆಲೋಚಿಸುವಂತೆ ಕಾಂಗ್ರೆಸ್ ತಿಳಿಸಿತ್ತು. ಆದರೆ, ಯಾರೊಬ್ಬರೂ ಸಂಪರ್ಕ ಮಾಡಿಲ್ಲ ಎಂದು ಹೇಳಿದರು.
ತಂದೆ ಜಿಟಿ ದೇವೇಗೌಡ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿ, ನಮ್ಮ ತಂದೆ ಎಲ್ಲೂ ಪಕ್ಷ ಬಿಡುತ್ತೇನೆಂದು ಹೇಳಿಲ್ಲ. ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಸರಿಹೋಗುತ್ತದೆ. ಎಲ್ಲಾ ಪಕ್ಷಗಳಲ್ಲೂ ಇಂತಹದ್ದೇ ವಾತಾವರಣ ಇದೆ. 3 ಪಕ್ಷಗಳಲ್ಲೂ ಈ ಪರಿಸ್ಥಿತಿ ಇದೆ. ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ತಂದೆ ಅವರ ಪಾಡಿಗೆ ಅವರು ಆರಾಮವಾಗಿ ಇದ್ದಾರೆಂದು ತಿಳಿಸಿದರು.
ಕಾಂಗ್ರೆಸ್ ಪರವಾಗಿ ಮಾತನಾಡುತ್ತಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ಪಕ್ಷದ ಪರವಾಗಿಲ್ಲ. ಕೆಲ ವಿಚಾರಗಳ ಬಂದಾಗ ಸಮಯ, ಸಂದರ್ಭಕ್ಕೆ ಅನುಗುಣವಾಗಿ ಮಾತಾಡುತ್ತಿದ್ದಾರೆ. ಪಕ್ಷದ ವಿರುದ್ಧವಾಗಿ ಮಾತನಾಡಿಲ್ಲ ಎಂದರು.