ಚನ್ನಪಟ್ಟಣ: ಉಪಚುನಾವಣೆ ಬಳಿಕ ಮೊದಲ ಬಾರಿಗೆ ಜೆಡಿಎಸ್ ಪಕ್ಷದ ಶಾಸಕರು, ಮುಖಂಡರ ಸಭೆ ನಡೆಸಲು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ನಿರ್ಧರಿಸಿದ್ದು, ಭಾನುವಾರ ಚನ್ನಪಟ್ಟಣದಲ್ಲಿ ಸಭೆ ನಡೆಯಲಿದೆ.
ಸಭೆಯಲ್ಲಿ ಶಾಸಕರ ಕುಂದು ಕೊರತೆ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡುವ ಕುರಿತು ಚರ್ಚೆ ಆಗಲಿದೆ ಎಂದು ತಿಳಿದುಬಂದಿದೆ.
ಈ ನಡುವೆ ಸಭೆ ಹಾಜರಾಗುವುದಿಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಮತ್ತು ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ಅವರು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕೆಲವು ಪ್ರಮುಖ ಕಾರ್ಯಕ್ರಮಗಳು, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಅನಿವಾರ್ಯ ಸಂದರ್ಭಗಳಿಂದಾಗಿ, ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಗೂ ಹಾಜರಾಗಲು ಸಾಧ್ಯವಾಗಲಿಲ್ಲ. ಆದರೆ, ಪಕ್ಷದ ನಾಯಕರ ಬಗ್ಗೆ ನನಗೆ ಅಸಮಾಧಾನವಿಲ್ಲ ಎಂದು ತಿಳಿಸಿದ್ದಾರೆ.
ಎಚ್.ಡಿ. ದೇವೇಗೌಡರು 92 ವರ್ಷದ ಹಿರಿಯ ಮುತ್ಸದ್ಧಿಯಾಗಿದ್ದಾರೆ, ಅವರು ಜಯಪ್ರಕಾಶ್ ನಾರಾಯಣ ಜೊತೆ ಸೇರಿ ಕಟ್ಟಿದ ಪಕ್ಷವಿದು. ಎಚ್. ಡಿ. ಕುಮಾರಸ್ವಾಮಿ ಅವರು ಸಹ ಎರಡೆರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ. ಅವರಿಬ್ಬರೇ ಸೂಕ್ತ ವ್ಯಕ್ತಿಯನ್ನು ಆರಿಸುತ್ತಾರೆಂದು ಹೇಳಿದರು.
ಪುತ್ರ ಹರೀಶ್ ಗೌಡ ಹೇಳಿಕೆ ಕುರಿತು ಮಾತನಾಡಿ, ನಿಖಿಲ್ ಕುಮಾರಸ್ವಾಮಿಯ ಆಪ್ತ ಸ್ನೇಹಿತ ನನ್ನ ಪುತ್ರ. ನಿಖಿಲ್ ಅವರೇ ರಾಜ್ಯಾಧ್ಯಕ್ಷನಾಗಲಿ ಎಂದು ಹೇಳಿದರೆ ಅದರಲ್ಲಿ ತಪ್ಪೇನು ಬಂತು?” ಎಂದು ಪ್ರಶ್ನೆ ಮಾಡಿದರು.
ನಾನು ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಓಡಾಡುತ್ತಿದ್ದೇನೆ. ಆದ್ದರಿಂದ ಪಕ್ಷದ ಸಂಘಟನೆ ಹಾಗೂ ಸಭೆಗೆ ಹಾಜರಾಗಲು ಆಗುತ್ತಿಲ್ಲ. ಇದನ್ನು ಹೊರತುಪಡಿಸಿದರೆ ನನಗೆ ಯಾವುದೇ ಬೇಸರವೂ ಇಲ್ಲ. ದಿಶಾ ಸಭೆಗೆ ನಮ್ಮ ನಾಯಕರು ಬಂದ ವೇಳೆ ನಾನು ಹೋಗಬೇಕಿತ್ತು. ಆರೋಗ್ಯ ಸರಿಯಿಲ್ಲದ ಕಾರಣದಿಂದ ನಾನು ಹೋಗಲು ಸಾಧ್ಯವಾಗಿಲ್ಲ. 2028ರ ಚುನಾವಣೆ ಬಳಿಕ ಯಾರು ಮುಖ್ಯಮಂತ್ರಿಯಾಗುತ್ತಾರೆ? ಎಂದು ಹೇಳಲು ನಾನು ಜ್ಯೋತಿಷಿಯಲ್ಲ. ಜನರಿಂದ ಗೆದ್ದು ಬಂದವರು ಮುಖ್ಯಮಂತ್ರಿಯಾಗುತ್ತಾರೆ. ಸದ್ಯಕ್ಕೆ ಸಿಎಂ ಆಗುವ ಆಸೆ, ಹಣಬಲ, ಶಕ್ತಿ ನನ್ನಲ್ಲಿ ಇಲ್ಲ ಎಂದು ಹೇಳಿದರು.
ನನಗೆ ಯಾರ ಮೇಲೆಯೂ ಯಾವುದೇ ಕೋಪ, ಬೇಸರ ಇಲ್ಲ. ತಾಳ್ಮೆಯಿಂದ ಇದ್ದೇನೆ. ಮನೆಯ ಜವಾಬ್ದಾರಿ ಜಾಸ್ತಿ ಆಗಿದೆ, ಕ್ಷೇತ್ರದ ಕೆಲಸಗಳು ನಿಮಗೇ ತಿಳಿದಿದೆ. ನನಗೆ 75 ವರ್ಷ ವಯಸ್ಸಾಗಿದೆ. ಆದ್ದರಿಂದ ಹೆಚ್ಚಿನ ಓಡಾಟ ಮಾಡಲು ಕಷ್ಟ ಆಗುತ್ತಿದೆ ಎಂದರು.
ಮುಡಾ ವಿಚಾರ ಕುರಿತು ಮಾತನಾಡಿ, ತಪ್ಪು ಮಾಡಿದ್ದರೆ ತನಿಖೆ ಮಾಡಲಿ, ಕ್ರಮ ಕೈಗೊಳ್ಳಲಿ ನಾನು ಯಾರ ಮೇಲೂ ಪ್ರಭಾವ ಬೀರಿಲ್ಲ. ನನ್ನ ಮಗಳು ಅಳಿಯ ಹಣ ಕೊಟ್ಟು ನಿವೇಶನ ಖರೀದಿ ಮಾಡಿದ್ದಾರೆ ಎಂದು ನನಗೆ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.