ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಎನ್ಡಿಎಯೊಂದಿಗೆ ಗುರುತಿಸಿಕೊಂಡಿರುವ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಟಿಕೆಟ್ ಹಂಚಿಕೆ ಸಂಬಂಧ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದೆ.
ನಿನ್ನೆಯೇ ದೆಹಲಿಗೆ ತೆರಳಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಬಿಜೆಪಿಯ ರಾಷ್ಟ್ರೀಯ ವರಿಷ್ಠ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.ಈ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ಜೆಡಿಎಸ್ ರಾಜ್ಯ ಯುವಘಟಕದ ಅಧ್ಯಕ್ಷ ನಿಖಿಲ್ಕುಮಾರಸ್ವಾಮಿ ಉಪಸ್ಥಿತರಿದ್ದರು ಎಂದು ಹೇಳಲಾಗಿದೆ.
ಮಾತುಕತೆ ಸಂದರ್ಭದಲ್ಲಿ ಸುಮಾರು ಬಹಳಹೊತ್ತಿನ ಕಾಲ ಸುದೀರ್ಘ ಚರ್ಚೆ ನಡೆಯಿತು ಎನ್ನಲಾಗಿದ್ದು, ಚರ್ಚೆ ವೇಳೆ ರಾಜ್ಯದಲ್ಲಿ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಸ್ಪರ್ಧಿಸಬಹುದಾದ ಕ್ಷೇತ್ರಗಳ ಬಗ್ಗೆ ಅಂತಿಮವಾಗಿ ಒಂದು ಹಂತದಲ್ಲಿ ನಿರ್ಧಾರಕ್ಕೆ ಬರಲಾಯಿತು ಎಂದು ಹೇಳಲಾಗಿದೆ. ಲಭ್ಯವಿರುವಮಾಹಿತಿ ಪ್ರಕಾರ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟು ಕೊಡಲು ನಿರ್ಧರಿಸಲಾಯಿತು ಎಂದು ಹೇಳಲಾಗಿದೆ.
ಇದುವರೆಗೂ ಕ್ಷೇತ್ರ ಹಂಚಿಕೆ ಬಗ್ಗೆ ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರಲ್ಲಿ ಒಂದು ರೀತಿಯ ಮುಸುಕಿನ ಗುದ್ದಾಟವೇ ನಡೆದಿತ್ತು. ಇದೀಗ ದೆಹಲಿಯಲ್ಲಿ 2 ಪಕ್ಷಗಳ ಮುಖಂಡರ ನಡುವೆ ಮಾತುಕತೆ ಸಂದರ್ಭದಲ್ಲಿ ಕೋಲಾರ, ಮಂಡ್ಯ, ಹಾಸನ ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಡಲು ನಿರ್ಧರಿಸಲಾಯಿತು ಎಂದು ತಿಳಿದುಬಂದಿದೆ.ಮುಂದಿನ ಎರಡು ಪಕ್ಷಗಳ ಮುಖಂಡರ ಸಭೆಯಲ್ಲಿ ಅಂತಿಮ ನಿರ್ಧಾರ ಹೊರ ಬೀಳಲಿದೆ ಎಂದು ಹೇಳಲಾಗುತ್ತಿದೆ.