ರಾಮನಗರ: ರಾಮನಗರದಲ್ಲಿ ಸೀರೆಗಳು ಸಿಕ್ಕಿರುವುದರ ಹಿಂದೆ ಜೆಡಿಎಸ್ ನವರ ಕೈವಾಡ ಇದೆ. ಚುನಾವಣಾ ಆಯೋಗಕ್ಕೆ ದೂರು ಕೊಡಲು ಮಾಡಿರುವ ಡ್ರಾಮಾ ಎಂದು ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ರವರ ಹೆಸರಿನಲ್ಲಿ ಸೀರೆಗಳನ್ನು ಖರೀದಿಸಿರುವಂತೆ ಬಿಲ್ ಹಾಕಿಸಿ ಗಿಮಿಕ್ ಮಾಡಿದ್ದಾರೆ. ಜನರ ಮುಂದೆ ನಮ್ಮನ್ನು ಬೆತ್ತಲೆ ಮಾಡಲು ಅವರು ಮಾಡಿರುವ ನಾಟಕ ಎಂದು ಟಾಂಗ್ ನೀಡಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗಿಫ್ಟ್ ಪಾಲಿಟಿಕ್ಸ್ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಶಿವರಾತ್ರಿ ಹಬ್ಬದ ಪ್ರಯುಕ್ತ ಕೆಲವು ಕಡೆ ಗಿಫ್ಟ್ ಕೊಟ್ಟಿದ್ದೇವೆ. ಚುನಾವಣೆ ನೀತಿ ಸಂಹಿತೆ ಬಂದಾಗ ಅದನ್ನು ನಿಲ್ಲಿಸಿದ್ದೇವೆ.ನೀತಿ ಸಂಹಿತೆ ವೇಳೆ ಹಂಚೋಕೆ ನಾವೇನು ದಡ್ಡರಾ. ಇನ್ನೊಂದಷ್ಟು ಜನರಿಗೆ ಗಿಫ್ಟ್ ಕೊಟ್ಟಿಲ್ಲ.
ಹಾಗಾಗಿ ಚುನಾವಣೆ ಮುಗಿದ ಬಳಿಕ ಅದನ್ನು ಕೊಡುತ್ತೇವೆ. ನಾವು ಸಂಪಾದನೆ ಮಾಡಿದರಲ್ಲಿ ಒಂದಿಷ್ಟನ್ನು ಬಡವರಿಗೆ ಹಂಚುತ್ತೇವೆ. ಆರೋಪ ಮಾಡುವವರ ಬಳಿಯೂ ಹಣ ಇದೆಯಲ್ಲ. ನೀವು ಬಡವರಿಗೆ ಕೊಡಿ ಎಂದರು.ನಾನೇ ಸಾಕಿದ ಗಿಣಿ, ನನ್ನನ್ನೇ ಹದ್ದಾಗಿ ಕುಕ್ಕಿದೆ ಎಂಬ ಕುಮಾರಸ್ವಾಮಿರವರ ಹೇಳಿಕೆಗೆ ಬಾಲಕೃಷ್ಣರವರು, ಕುಮಾರಸ್ವಾಮಿರವರು ಚುನಾವಣೆಗೆ ಬರುವ ಮುಂಚೆಯೇ ನಾನು ಶಾಕನಾಗಿದ್ದೆ. ಬಿಜೆಪಿ ಶಾಸಕನಾಗಿದ್ದರೂ ಬಿಜೆಪಿಗೆ ಅನ್ಯಾಯ ಮಾಡಿ,
ಸಂಸತ್ ಚುನಾವಣೆಯಲ್ಲಿ ಸಾಥ್ ಕೊಟ್ಟಿದ್ದೆ. ನನ್ನ ಕ್ಷೇತ್ರದಲ್ಲಿ ಜೆಡಿಎಸ್ ಮತಗಳು 4ಸಾವಿರ ಇತ್ತು. ನಾನು ಅವರಿಗೆ 8ಸಾವಿರ ಮತಗಳ ಲೀಡ್ ಕೊಡಿಸಿದೆ. ಅದಾದ ಬಳಿಕ ಜೆಡಿಎಸ್ ಸೇರಿಕೊಂಡೆ. ನಾನು ಸಿಎಂ ಆಗಲು ಬಾಲಕೃಷ್ಣ ಕಾರಣ ಅಂತ ಅವರೇ ಸದನದಲ್ಲೂ ಹೇಳಿದ್ದಾರೆ. ಅವರು ಮುಖ್ಯಮಂತ್ರಿ ಆದಾಗ ಬಿಡಿಎ ಚೇರ್ಮನ್ ಮಾಡುತ್ತೇನೆ ಅಂದಿದ್ದರು, ಮಾಡಲಿಲ್ಲ ಎಂದು ಕಿಡಿಕಾರಿದರು.
ರಾಜಕೀಯ ತೆವಲು ಎಂಬ ಅರ್ಥ ನನಗೆ ಗೊತ್ತಿಲ್ಲ.
ಇದಕ್ಕೆ ನಾನು ಕ್ಷಮೆ ಕೇಳುತ್ತೇನೆ ನಿಖಿಲ್ ಅಣ್ಣ. ಇನ್ನು ಮುಂದೆ ನಿಖಿಲ್ ಅಣ್ಣನ ಕೇಳಿಯೇ ಮಾತನಾಡುತ್ತೇನೆ ಎಂದು ಟಾಂಗ್ ನೀಡಿದರು.
ಚುನಾವಣೆಗೆ ಪ್ಯಾರ ಮಿಲಿಟರಿ ಕರೆಸಬೇಕು ಎಂಬ ಕುಮಾರಸ್ವಾಮಿರವರ ಮಾತಿನ ಅರ್ಥ ಮೈತ್ರಿ ಅಭ್ಯರ್ಥಿ ಈಗಾಗಲೇ ಸೋಲನ್ನು ಒಪ್ಪಿಕೊಂಡಂತಾಗಿದೆ. ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕಂಟ್ರೋಲ್ ನಲ್ಲಿ ಇದೆ.
ಆಯೋಗದ ಮೇಲೆ ದೂರುವವರು ಸೋಲನ್ನ ಒಪ್ಪಿಕೊಂಡಿದ್ದಾರೆ ಅಂತ ಅರ್ಥ. ಸೋತ ಮೇಲೆ ದುಡ್ಡು , ಸೀರೆ, ಗಿಫ್ಟ್ ಕಾರ್ಡ್ ಹಂಚಿ ಗೆದ್ದರು ಅಂತಾರೆ. ಎಷ್ಟೋ ಜನ ಕಾರ್ಯಕರ್ತರು ಕಾಂಗ್ರೆಸ್ ಗೆ ಬರುತ್ತಿದ್ದಾರೆ.ಅವರು ದಡ್ಡರಲ್ಲ, ಎಲ್ಲರೂ ಪ್ರಜ್ಞಾವಂತರು. ನಾವು ಅವರ ಮನವೊಲಿಸಿ ಅವರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ನಾವು ಅಭಿವೃದ್ಧಿಗಾಗಿ ಮತ ಕೇಳುತ್ತಿದ್ದೇವೆ ಎಂದು ಬಾಲಕೃಷ್ಣ ಹೇಳಿದರು.