ಬೆಂಗಳೂರು: ಪಕ್ಷ ಸ್ಥಾಪನೆಗೊಂಡು ೨೫ ವರ್ಷ ಸಂದ ಹಿನ್ನೆಲೆಯಲ್ಲಿ ಬೆಳ್ಳಿ ಸಂಭ್ರಮ ಹೆಸರಿನಲ್ಲಿ ರಾಜ್ಯಾದ್ಯಂತ ಪಕ್ಷದ ವತಿಯಿಂದ ಸಮಾವೇಶಗಳನ್ನು ನಡೆಸಲು ಜೆಡಿಎಸ್ ಸಿದ್ಧತೆ ನಡೆಸಿದೆ.
ಮಾಜಿ ಪ್ರಧಾನಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸಮಾವೇಶ ನಡೆಯಲಿವೆ.
ಇದಕ್ಕೆ ಪೂರ್ವಭಾವಿಯಾಗಿ ಇಂದು ಹಾಸನದಲ್ಲಿ ಬೃಹತ್ ಸಮಾವೇಶ ನಡೆದಿದೆ. ಹಾಸನದ ಭುವನಹಳ್ಳಿ ಬೈಪಾಸ್ ಬಳಿ ಸಮಾವೇಶಕ್ಕೆ ಬೃಹತ್ ವೇದಿಕೆ ನಿರ್ಮಾಣಗೊಂಡಿದೆ. ಸುಮಾರು ೧ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ. ಪಕ್ಷದ ವರ್ಚಸ್ಸು ವೃದ್ಧಿಸುವ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಂಡಿರುವ ಈ ಸಮಾವೇಶದಲ್ಲಿ ಆಡಳಿತಾ ರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯಲು ಜೆಡಿಎಸ್ ನಾಯಕರು ಸಿದ್ಧತೆ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ವತಿಯಿಂದ ಪದೇ ಪದೇ ಅಹಿಂದ ಹೆಸರಿನಲ್ಲಿ ಸಮಾವೇಶ ಮಾಡಿ ತಮ್ಮ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿರುವ ಟೀಕಾಕಾರರಿಗೆ ಪ್ರತ್ಯುತ್ತರ ನೀಡಲು ಸಿದ್ಧತೆ ನಡೆಸಿದ್ದಾರೆ.
ಸ್ಥಳೀಯ ಸಂಸ್ಥೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ. ಹಾಸನದಲ್ಲಿ ನಡೆಯುವ ಸಮಾವೇಶ ಮುಗಿದ ನಂತರ ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧೆಡೆ ಸಮಾವೇಶವನ್ನು ನಡೆಸಲಾಗುವುದು. ಇಂದು ನಡೆಯುತ್ತಿರುವ ಸಮಾವೇಶಕ್ಕೆ ಮುಂಜಾಗ್ರತಾ ಕ್ರಮಕ್ಕೆ ೧೫೦೦ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಮಂಡ್ಯ, ಹುಬ್ಬಳ್ಳಿ, ಮೈಸೂರು, ಕೋಲಾರ ಸೇರಿದಂತೆ ವಿವಿಧೆಡೆ ಸಭೆ ಸಮಾವೇಶ ನಡೆಸಲು ಚಿಂತನೆ ನಡೆಸಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮಾವೇಶದ ಎಲ್ಲಾ ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ.
ಸಮಾವೇಶದ ಜತೆಗೆ ಪಕ್ಷ ಸಂಘಟನೆಯ ಬಗ್ಗೆಯೂ ಗಮನ ಹರಿಸಲಾಗುವುದು ಎಂದು ಮುಖಂಡರೋರ್ವರು ತಿಳಿಸಿದ್ದಾರೆ. ಬಿಜೆಪಿ ಜತೆಯಲ್ಲಿ ಮೈತ್ರಿಇಟ್ಟುಕೊಂಡು ಪಕ್ಷ ಸಂಘಟನೆಯನ್ನು ಪ್ರತ್ಯೇಕವಾಗಿ ನಡೆಸಲು ನಿರ್ಧರಿಸುವುದು ಕುತೂಹಲಕ್ಕೆ ಕಾರಣವಾಗಿದೆ.
ಶಕ್ತಿ ಪ್ರದರ್ಶನಕ್ಕೆ ಜೆಡಿಎಸ್ ಸಜ್ಜು, ಬೆಳ್ಳಿ ಸಂಭ್ರಮ ಹೆಸರಿನಲ್ಲಿ ರಾಜ್ಯಾದ್ಯಂತ ಸಮಾವೇಶಕ್ಕೆ ನಿರ್ಧಾರ



