ರಾಮನಗರ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್ ಸಂಗ್ರಹಣೆ ವಿರೋಧಿಸಿ ಶಾಸಕ ಎ.ಮಂಜುನಾಥ್ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಿಡದಿ ಸಮೀಪದ ಕಣಿಮಿಣಿಕೆ ಟೋಲ್ ಪ್ಲಾಜಾ ಬಳಿ ಪ್ರತಿಭಟನೆ ವೇಳೆ ಮಾತನಾಡಿದ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿಯವರು ಹೈವೆಯನ್ನು ಲೋಕಾರ್ಪಣೆನೋ ಟೋಲಾರ್ಪಣೆನೋ ಎಂದು ವ್ಯಂಗ್ಯ ವಾಡಿದರು.
ನಾವು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡುತ್ತಿದ್ದೇವೆ . ಹೆದ್ದಾರಿಯಲ್ಲಿ ಸಂಚರಿಸುವ ಗರ್ಭಿಣಿ ಸ್ತ್ರೀಯರಿಗೆ ಪ್ರೈಮರಿ ಹೆಲ್ತ್ ಕೇರ್ ಸೆಂಟರ್ ಇಲ್ಲ, ಆಂಬುಲೆನ್ಸ್ ವ್ಯವಸ್ಥೆ ಇಲ್ಲ, ಹೈವೆ ರಸ್ತೆ ಪೂರ್ಣಗೊಳಿಸದೇ ಇಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಇಲ್ಲಿ ಯಾವುದೇ ಮೂಲಭೂತ ಸೌಕರ್ಯವನ್ನೂ ಕಲ್ಪಿಸಿಲ್ಲ ಎಂದು ದೂರಿದರು. ಟೋಲ್ ಬಳಿ ಪೂರಕವಾದ ಹೋಟೆಲ್, ಶೌಚಾಲಯ, ಆಸ್ಪತ್ರೆಗಳಿಗೆ ಸ್ಥಳಾವಕಾಶವೂ ಇಲ್ಲ. ಈ ಹಿನ್ನೆಲೆಯಲ್ಲಿ ಇದು ಅನಧಿಕೃತ ಟೋಲ್ ಸಂಗ್ರಹ ಕೇಂದ್ರವಾಗಿದ್ದು ಪ್ರಯಾಣಿಕರಿಂದಲೂ ನಿಗದಿತ ದರಕ್ಕಿಂತ ಹೆಚ್ಚುವರಿ ಸುಂಕ ವಸೂಲಿ ಮಾಡಿ ಅನ್ಯಾಯವೆಸಗಲಾಗುತ್ತಿದೆ. ನಾವು ಸಾರ್ವಜನಿಕರ ಧ್ವನಿಯಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ಮಾಗಡಿ ಶಾಸಕ ಎ.ಮಂಜುನಾಥ್ ಮಾತನಾಡಿ, ಅವೈಜ್ಞಾನಿಕ ರಸ್ತೆ ನಿರ್ಮಿಸಿ ಅನಿಯಮಿತ ಟೋಲ್ ಸಂಗ್ರಹದ ಹೆಸರಲ್ಲೇ ಹಗಲು ದರೋಡೆ ಮಾಡುತ್ತಿರುವುದಲ್ಲದೆ ಇದನ್ನು ಸಮರ್ಥಿಕೊಳ್ಳುತ್ತಿರುವ ಭೂಪ ಎಂದರೆ ಪ್ರತಾಪ್ ಸಿಂಹ ಇದು ಅವರ ಅವಿವೇಕದ ಪರಮಾವದಿಯಾಗಿದೆ ಎಂದು ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ 200 ಕ್ಕೂ ಎಚ್ಚು ಪೊಲಿಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು. ಕೆಲಕ್ಷಣ ಆತಂಕದ ವಾತಾವರಣ ನಿರ್ಮಾಣಗೊಂಡರೂ ಪೊಲೀಸರು ಮದ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಪ್ರತಿಭಟಿಸುತ್ತಿದ್ದ ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಮಾಗಡಿ ಶಾಸಕ ಎ.ಮಂಜುನಾಥ್ ಹಾಗೂ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಹೊರತು ಪಡಿಸಿ ನೂರಾರು ಕಾರ್ಯಕರ್ತರನ್ನು ಪೆÇಲೀಸರು ವಶಕ್ಕೆ ಪಡೆದು ಕರೆದೊಯ್ದರು.
Leave a Review