ಮಾಗಡಿ: ತಾಲ್ಲೂಕಿನ ಬೆಳಗುಂಬ ಗ್ರಾಪಂಗೆಅದ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ತಿರುಮಲೆ ಭೈರಪ್ಪ ಉಪಾದ್ಯಕ್ಷರಾಗಿ ಸಿಡಗನಹಳ್ಳಿಯ ಶಬೀನಾತಾಜ್ ಅಬ್ದುಲ್ ಬಷೀರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅಕ್ಷರ ದಾಸೋಹ ಗಂಗಾಧರ್ ಘೋಷಣೆ ಮಾಡಿದರು.
ನೂತನ ಅದ್ಯಕ್ಷ ತಿರುಮಲೆ ಭೈರಪ್ಪ ಮಾತನಾಡಿ ನನ್ನನ್ನು ಗ್ರಾಪಂ ಸದಸ್ಯನನ್ನಾಗಿ ಆಯ್ಕೆ ಮಾಡಿದ ನನ್ನ ವಾರ್ಡಿನ ಪ್ರತಿಯೊಬ್ಬ ಮತದಾರರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.ಅವರು ನನ್ನನ್ನು ಗ್ರಾಪಂ ಸದಸ್ಯನನ್ನಾಗಿ ಆಯ್ಕೆ ಮಾಡದಿದ್ದರೆ ಇಂದು ಅದ್ಯಕ್ಷನಾಗಲು ಸಾಧ್ಯವಾಗುತ್ತಿರಲಿಲ್ಲ. ಕಲ್ಲಂಟೆಪಾಳ್ಯದಲ್ಲಿ ಕೊಟ್ಟ ಮಾತಿನಂತೆ ಸ್ವಂತ ಹಣ ಹಾಗೂ ದಾನಿಗಳ ಸಹಕಾರದಿಂದ ದೇವಾಲಯ ನಿರ್ಮಿಸುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.
ಈ ಹಿಂದೆ ನನ್ನ ಶ್ರೀಮತಿ ಯಶೋದಮ್ಮ ಅದ್ಯಕ್ಷೆಯಾಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಇದೀಗ ನನ್ನ ಅವಧಿಯಲ್ಲಿ ಪಂಚಾಯ್ತಿಗೆ ಬರುವ ಅನುಧಾನವನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯತಿ ವ್ಯಾಪ್ತಿಯ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಗ್ರಾಪಂ ವ್ಯಾಪ್ತಿಯ ಪಣಕನಕಲ್ಲು ಗ್ರಾಮದ ಬಳಿಯಲ್ಲಿ ಮಾಜಿ ಶಾಸಕರಾದ ಎ.ಮಂಜುನಾಥ್ ಅವರು ಸುಮಾರು ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಿದ್ದು ಇಲ್ಲಿ ಸುಮಾರು ಎರಡು ಕಿಲೋಮೀಟರ್ ವರೆಗೂ ನೀರು ಶೇಖರಣೆಯಾಗಿದ್ದು ಈ ಭಾಗದ ಜನರಿಗೆ ಅನುಕೂಲವಾಗಿದೆ.ಈ ಕಾಮಗಾರಿಯಲ್ಲಿ ಹಣ ದುರುಪಯೋಗವಾಗಿದೆ ಎಂಬ ಮಾತು ಕೇಳಿ ಬಂದಿದ್ದು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ.ಸಂಬಂಧಿಸಿದ ಅಧಿಕಾರಿಗಳು ಇದಕ್ಕೆ ಉತ್ತರ ನೀಡಬೇಕು.
ಕಲ್ಲೆಂಟೆಪಾಳ್ಯದ ಬಳಿಯಲ್ಲಿ ಪಾರ್ಕ್ ನಿರ್ಮಾಣ ಮಾಡುವ ಜಾಗದಲ್ಲಿ ಬಡ ಜನರಿಗೆ ನಿವೇಶನ ನೀಡಬೇಕು ಎಂಬ ಮಾತು ಕೇಳಿ ಬರುತ್ತಿದ್ದು ಇದು ಗುಂಡು ತೋಪು ಆಗಿರುವುದರಿಂದ ನಿವೇಶನ ನೀಡಲು ಸಾಧ್ಯವಿಲ್ಲ.ಈ ಜಾಗದಲ್ಲಿ ಹಾಲಿ ಶಾಸಕರಾದ ಬಾಲಕೃಷ್ಣ ಅವರು ಪೊಲೀಸ್ ಕ್ವಾಟ್ರಸ್ ನಿರ್ಮಾಣ ಮಾಡುವ ಚಿಂತನೆ ನಡೆಸಿದ್ದು ತಾತ್ಕಾಲಿಕವಾಗಿ ಪಾರ್ಕ್ ನಿರ್ಮಾಣ ಕಾರ್ಯವನ್ನು ನಿಲ್ಲಿಸಲಾಗಿದೆ.ನಾನು ಜೆಡಿಎಸ್ ತೊರೆಯುತ್ತೇನೆ ಎಂಬ ಮಾತು ಕೇಳಿ ಬರುತ್ತಿದ್ದು ಆಯಾ ಸಂದರ್ಭಕ್ಕನುಗುಣವಾಗಿ ರಾಜಕೀಯ ಬದಲಾವಣೆ ಅನಿವಾರ್ಯ ಎಂದು ಭೈರಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಉಪಾಧ್ಯಕ್ಷೆ ಶಬೀನಾತಾಜ್ ಮಾತನಾಡಿ ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಅನಕ್ಷರತೆಯಿದ್ದು ಸಾಕ್ಷರತೆ ಕುರಿತು ಆಯಾ ಗ್ರಾಮಗಳಲ್ಲಿ ಸಭೆಗಳನ್ನು ಆಯೋಜಿಸಿ ಸಾಕ್ಷರತೆಯ ಅರಿವು ಮೂಡಿಸಿ ಅಕ್ಷರ ಜಾಗೃತಿ ಮೂಡಿಸಲು ವಿಶೇಷ ಗಮನ ಹರಿಸಲಾಗುವುದು ಎಂದು ಹೇಳಿದರು.
ಮಾಜಿ ಗ್ರಾಪಂ ಅದ್ಯಕ್ಷರಾದ ಬೆಳಗುಂಬ ಕೋಟಪ್ಪ, ಸಿ.ಆರ್.ಸುರೇಶ್, ಸದಸ್ಯರಾದ ರಾಧಿಕಾರಾಜಣ್ಣ, ಚಂದ್ರಕಲಾ ವೆಂಕಟೇಶ್, ಬಿ.ಜಿ.ವಿಶ್ವನಾಥ್, ಕನಕಗಿರೀಶ್, ಹೊನ್ನಶಾಮಯ್ಯ, ಜಯಲಕ್ಷ್ಮಮ್ಮ, ಹೆಚ್.ಶಿವಕುಮಾರ್, ಸದಾಶಿವಯ್ಯ, ಗಂಗಲಕ್ಷ್ಮಿ, ಉಮಾದೇವಿ, ಗಂಗಲಕ್ಷ್ಮಿ, ಜೆಡಿಎಸ್ ಮಾಜಿ ಅಧ್ಯಕ್ಷ ಬೆಳಗುಂಬ ಗುಡ್ಡೇಗೌಡ, ಪಣಕನಕಲ್ಲು ಲಕ್ಷ್ಮಣ್, ತಿರುಮಲೆಯ ಟಿ.ಎಸ್.ಪ್ರಭು, ಪ್ರಕಾಶ್, ಶೇಖರ್ ಭೈರಪ್ಪ, ಮೋಹನ್, ಮಾರಪ್ಪ, ವೆಂಕಟೇಶ್, ನಂಜಪ್ಪ ಸೇರಿದಂತೆ ಮತ್ತಿತರಿದ್ದರು.