ಜೆಮಿಮಾ ರೋಡ್ರಿಗಸ್ ಅವರ ಅತ್ಯದ್ಭುತ ಅಜೇಯ ಶತಕ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಹೊಣೆಯರಿತ ಶತಕದ ನೆರವಿನಿಂದ ಭಾರತ ತಂಡ ಹಾಲಿ ವಿಶ್ವಚಾಂಪಿಯನ್
ಆಸ್ಟ್ರೇಲಿಯಾವನ್ನು ೫ ವಿಕೆಟ್ ಗಳಿಂದ ಸೋಲಿಸಿ ಐಸಿಸಿ ಮಹಿಳಾ ವಿಶ್ವಕಪ್ ನ ಪೈನಲ್ ಪ್ರವೇಶಿಸಿದೆ ಈ ಮೂಲಕ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ್ದ ಆಘಾತಕಾರಿ ಸೋಲಿಗೆ ಈ ಟೂರ್ನಿ ಮುಗಿಯುವುದರೊಳಗಾಗಿಯೇ ಭಾರತ ತಕ್ಕ ತಿರುಗೇಟು ನೀಡಿದೆ. ನವೆಂಬರ್  ೨ರಂದು ನಡೆಯುವ ಫೈನಲ್ ನಲ್ಲಿ ಭಾರತ ತಂಡ ಪ್ರಶಸ್ತಿಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣೆಸಬೇಕಿದೆ.
ಗುರುವಾರ ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ೪೯.೫ ಓವರ್ ಗಳಲ್ಲಿ ೩೩೮ ರನ್ ಗಳಿಗೆ ಆಲೌಟ್ ಆಯಿತು. ಇದನ್ನು ಭಾರತ ತಂಡ ಕೇವಲ ೫ ವಿಕೆಟ್ ಕಳೆದುಕೊಂಡು ಇನ್ನೂ ೯ ಎಸೆತಗಳು ಬಾಕಿ ಉಳಿದಿರುವಂತೆ ಗುರಿ ತಲುಪಿತು. ವಿಶ್ವಕಪ್ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತವನ್ನು ಬೆಂಬತ್ತಿ ಗೆಲುವು ಸಾಧಿಸಿದ ಗೌರವ ಇದೀಗ ಭಾರತದ ಪಾಲಾಗಿದೆ. ಇದೇ ವಿಶ್ವಕಪ್ ನ ಲೀಗ್ ಪಂದ್ಯದಲ್ಲಿ ಭಾರತ ನೀಡಿದ್ದ ೩೩೦ ರನ್ ಗಳನ್ನು ಬೆಂಬತ್ತಿ ಆಸ್ಟ್ರೇಲಿಯಾ ಜಯಗಳಿಸಿದ್ದು ಈ ಹಿಂದಿನ ವಿಶ್ವದಾಖಲೆಯಾಗಿತ್ತು.
ಇದಾಗಿ ಕೇವಲ ೧೮ ದಿನಗಳಲ್ಲಿಯೇ ಭಾರತ ಈ ವಿಶ್ವದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದೆ. ಮಾತ್ರವಲ್ಲದೆ ವಿಶ್ವಕಪ್ ನಾಕೌಟ್ ಪಂದ್ಯದಲ್ಲೂ ಅತಿ ದೊಡ್ಡ ಮೊತ್ತ ಬೆಂಬತ್ತಿ ಗೆದ್ದ ಗೌರವವೂ ಭಾರತದ ಪಾಲಾಗಿದೆ. ಕೌರ್- ರೋಡ್ರಿಗಸ್ ಶತಕದ ಜೊತೆಯಾಟ ಗೆಲ್ಲಲು ದೊಡ್ಡ ಗುರಿ ಪಡೆದಿದ್ದ ಭಾರತ ತಂಡ ೧೩ ರನ್ ಆಗಬೇಕಾದರೆ ಡ್ಯಾಶಿಂಗ್ ಓಪನರ್
ಶೆಫಾಲಿ ವರ್ಮಾ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಉತ್ತಮವಾಗಿ ಆಡುತ್ತಿದ್ದ ಉಪನಾಯಕಿ ಸ್ಮೃತಿ ಮಂದಾನ(೨೪) ಅವರು ಸಹ ತಂಡದ ಮೊತ್ತ ೫೯ ಆಗಿರುವಾಗ ಔಟಾಗಿ ಪೆವಿಲಿಯನ್ ಗೆ ಮರಳಿದರು. ಈ ಹಂತದಲ್ಲಿ ಬಹಳ ಜಾಗರೂಕತೆಯಿಂದ ಆಡಿದ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಸ್ಥಳೀಯ ಹುಡುಗಿ ಜೆಮಿಮಾ ರೋಡ್ರಿಗಸ್ಅವರು ೩ನೇ ವಿಕೆಟ್ ಗೆ ಮಹತ್ವದ ೧೬೫ ರನ್ ಗಳ ಜೊತೆಯಾಟವಾಡಿ ಆಸೀಸ್ ಕೈಯಿಂದ ಜಯವನ್ನು ಕಸಿದುಕೊಂಡರು. ಉತ್ತಮವಾಗಿ ಆಡುತ್ತಿದ್ದ ಹರ್ಮನ್ ಪ್ರೀತ್ ಕೌರ್ ಅವರು ತಂಡದ ಮೊತ್ತ ೨೨೬ ಆಗಿದ್ದಾಗ ಸದರ್ ಲ್ಯಾಂಡ್ ಎಸೆತದಲ್ಲಿ ಎಡವಿ ಗಾರ್ಡನರ್ ಗೆ ಕ್ಯಾಚಿತ್ತರು. ೮೮ ಎಸೆತಗಳನ್ನು ಎದುರಿಸಿದ ಅವರು ೧೦ ಬೌಂಡರಿ
ಮತ್ತು ೨ ಸಿಕ್ಸರ್ ಗಳಿದ್ದ ೮೯ ರನ್ ಗಳಿಸಿ ಔಟಾದರು.
ಇದಾದ ಬಳಿಕ ಒಂದು ಬದಿಯಲ್ಲಿ ಗಟ್ಟಿಯಾಗಿ ನೆಲೆಯೂರಿದ ಜೆಮಿಮಾ ತನ್ನ ಶತಕ ಪೂರೈಸಿದ್ದಲ್ಲದೆ ಅಂತ್ಯದವರೆಗೂ ಕ್ರೀಸಿನಲ್ಲಿ ನಿಂತು ತಂಡವನ್ನು ಜಯದ ದಡ ತಲುಪಿಸಿದರು.
೧೧೫ ಎಸೆತಗಳಲ್ಲಿ ಶತಕ ಗಳಿಸಿದ ಅವರು ೧೩೪ ಎಸೆತಗಳನ್ನು ಎದುರಿಸಿ ೧೪ ಬೌಂಡರಿಗಳಿದ್ದ ೧೨೭ ರನ್ ಗಳಿಸಿ ಅಜೇಯರಾಗಿ ಉಳಿದರು. ದೀಪ್ತಿ ಶರ್ಮಾ(೨೪) ರಿಚಾ ಘೋಷ್(೨೬) ಮತ್ತು ಅಮನ್ ಜೋತ್ ಕೌರ್ (ಔಟಾಗದೆ ೧೫ಧ ಮತ್ತೊಂದು ತುದಿಯಲ್ಲಿ ವೇಗವಾಗಿ ರನ್ ಗಳಿಸುವ ಮೂಲಕ ತಂಡದ ಜಯದಲ್ಲಿ ಯೋಗದಾನ ನೀಡಿದರು. ಜೆಮಿಮಾ ರೋಡ್ರಿಗಸ್ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.


 
		 
		 
		
 
		
 
    