ಶಿಡ್ಲಘಟ್ಟ: ತಾಲೂಕು ಸ್ವೀಪ್ ಸಮಿತಿ ಮಾಡುತ್ತಿರುವ ಮತದಾನ ಜಾಗೃತಿ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ತಾಲೂಕು ಪತ್ರಕರ್ತರು ಇಂದು ನಗರದಲ್ಲಿ ಮೆರವಣಿಗೆ ಮಾಡಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ “ ಮತದಾನ ಪರ್ವ- ದೇಶದ ಗರ್ವ”, “ ಮತದಾನ – ನಮ್ಮೆಲ್ಲರ ಹಕ್ಕು” ಎಂಬ ಘೋಷಣೆಗಳನ್ನು ಮೊಳಗಿಸಿದರು.
ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಜಿ. ಮುನಿರಾಜು ಹಲವಾರು ವಿನೂತನ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ಮತದಾನ ಜಾಗೃತಿ ಮೂಡಿಸಿದ್ದರು.ವ್ಯವಸ್ಥಿತ ರೀತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳ ಸುದ್ದಿಗಳನ್ನು ಪ್ರಕಟಿಸುವ ಪತ್ರಕರ್ತರನ್ನು ಒಳಗೊಂಡಂತೆ ಕಾರ್ಯಕ್ರಮ ನಡೆಸಬೇಕೆಂಬ ಹಂಬಲಕ್ಕೆ ಬೆಂಬಲ ನೀಡಿದ್ದರು. ತಡವಾದರೂ ಇಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಾಪುರ ಮಂಜುನಾಥ್ ಜೊತೆಗೆ ಎಲ್ಲ ಸಕ್ರಿಯ ಪತ್ರಕರ್ತರನ್ನು ಮೆರವಣಿಗೆಯಲ್ಲಿ ಕರೆದೊಯ್ದಿದ್ದರು.
ಇವರೊಂದಿಗೆ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ನಗರಸಭೆ ಪೌರಕಾರ್ಮಿಕರು ಮತ್ತು ಸಿಬ್ಬಂದಿಯೂ ಸಹ ಪಾಲ್ಗೊಂಡಿದ್ದರು.ಸಮಾನತೆಯ ಅವಕಾಶಗಳಿಗಾಗಿ ಹಂಬಲಿಸುತ್ತಿದ್ದ ಹಲವಾರು ಪತ್ರಕರ್ತರು ಈ ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಕೋಟಹಳ್ಳಿ ಅನಿಲ್ ಕುಮಾರ್, ಮೈತ್ರಿ ಲೋಕೇಶ್, ಅರುಣ್ ಸಿಂಹ ರಜಪೂತ್, ಮುಂತಾದವರು ಉತ್ಸಾಹದಿಂದ ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.ಬಸ್ ನಿಲ್ದಾಣದಲ್ಲಿ ಸಂಘದ ಅಧ್ಯಕ್ಷ ವೀರಾಪುರ ಮಂಜುನಾಥ್ ಮತದಾನ ಪ್ರಮಾಣವಚನವನ್ನು ಬೋಧಿಸಿದರು. ಇಂತಹ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತರು ಕಣ್ತುಂಬಿಕೊಂಡರು.