ಬೆಂಗಳೂರು: ಕ್ರೀಡಾಪಟುಗಳಲ್ಲಿ ಉದ್ದೀಪನ ಮದ್ದು ಸೇವನೆಯ ಪಿಡುಗು ಮಟ್ಟ ಹಾಕಲು ಜೆಎಸ್ಡಬ್ಲ್ಯು ಇನ್ಸ್ಪೈರ್ ಇನ್ಸಿಟಿಟ್ಯೂಟ್ ಆಫ್ ಸ್ಪೋರ್ಟ್ಸ್ ಸಂಸ್ಥೆಯು ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಮತ್ತು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಗಳೊಂದಿಗೆ ಕೈಜೋಡಿಸಲು ನಿರ್ಧರಿಸಿದೆ.
ಈಚೆಗೆ ಬಳ್ಳಾರಿಯಲ್ಲಿರುವ ಈ ಸಂಸ್ಥೆಯು ಕ್ರೀಡಾ ತರಬೇತಿ ಕೇಂದ್ರದಲ್ಲಿ ಈಚೆಗೆ ಉದ್ದೀಪನ ಮದ್ದು ಬಳಕೆ ಮಾಡಿದ್ದರೆನ್ನಲಾದ 23 ಆಟಗಾರರನ್ನು ಹೊರಹಾಕಿತ್ತು. ಕಳೆದ ಅಕ್ಟೋಬರ್ನಲ್ಲಿ ಬೇರೆ ಬೇರೆ ಕ್ರೀಡೆಗಳಲ್ಲಿ ಇರುವ ಅಥ್ಲೀಟ್ಗಳು ಇದರಲ್ಲಿದ್ದರು.
‘ನಮ್ಮ ಕ್ಯಾಂಪಸ್ನಲ್ಲಿ ಕೆಲವು ಸಿರಿಂಜ್ಗಳು ಪತ್ತೆಯಾಗಿದ್ದವು ಮತ್ತು ಶಿಸ್ತು ಕ್ರಮವಾಗಿ ಕೆಲವು ಅಥ್ಲೀಟ್ಗಳನ್ನು ಇಲ್ಲಿಂದ ಹೊರಹಾಕಲಾಗಿತ್ತು.
ನಮ್ಮ ಆಂತರಿಕ ನಿಯಮಗಳು ಕಟ್ಟುನಿಟ್ಟಾಗಿವೆ. ಅವುಗಳನ್ನು ಪಾಲಿಸುವುದು ಕಡ್ಡಾಯ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಶ್ದಿ ವಾರ್ಲೆ ಸುದ್ದಿಸಂಸ್ಥೆಗೆ ನೀಡಿರುವ ಪ್ರಕಟಣೆಯಲ್ಲಿ ಹೇಳಿದ್ದಾರೆ.‘ಈ ಕ್ರಮದ ಮೂಲಕ ನಮ್ಮ ಸಂಸ್ಥೆಯು ನಿಯಮಗಳೊಂದಿಗೆ ರಾಜೀ ಮಾಡಿಕೊಳ್ಳುವುದಿಲ್ಲ ಮತ್ತು ತಪ್ಪು ನಡೆಯಲು ಆಸ್ಪದ ಕೊಡುವುದಿಲ್ಲ ಎಂಬ ಸಂದೇಶ ನೀಡಿದೆ. ಇಲ್ಲಿಯ ಅಥ್ಲೀಟ್ಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದೂ ಅವರು ಹೇಳಿದ್ದಾರೆ.