ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಕಬ್ಬಾಳು ಗ್ರಾಮಕ್ಕೆ 12 ಕಾಡಾನೆಗಳು ನುಗ್ಗಿದ್ದು ನಿವಾಸಿಗಳು ಕಂಗಾಲಾಗಿದ್ದಾರೆ. 12 ಆನೆಗಳ ಗುಂಪೊದು ರಾತ್ರಿ ಏಕಾಏಕಿ ಗ್ರಾಮಕ್ಕೆ ನುಗ್ಗಿದೆ.
ಇದರಿಂದ ಜನರು ಭಯಭೀತರಾಗಿದ್ದು ಆನೆಗಳ ಗುಂಪನ್ನು ಕಾಡಿಗಟ್ಟುವಂತೆ ಮನವಿ ಮಾಡಿದ್ದಾರೆ. ಸದ್ಯ ಕಾಡಾನೆ ಗುಂಪು ಕಬ್ಬಾಳು ಕಡೆಯಿಂದ ಕಾಂಚನಹಳ್ಳಿ ಕಡೆ ತೆರಳಿದೆ ಎಂಬ ಮಾಹಿತಿ ಸಿಕ್ಕಿದೆ. ಗ್ರಾಮದ ರಸ್ತೆಯಲ್ಲಿ ಕಾಡಾನೆಗಳು ಸಾಲಾಗಿ ಹೋಗುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಕಾಡಾನೆಗಳ ಹಾವಳಿಯಿಂದ ಕಬ್ಬಾಳು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಕೆಲ ದಿನಗಳ ಹಿಂದೆ ಓರ್ವ ರೈತನನ್ನು ಕಾಡಾನೆಗಳು ಬಲಿ ಪಡೆದಿದ್ದವು. ಜಮೀನಿಗೆ ನೀರು ಹರಿಸಲು ತೆರಳಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿ ಬಲಿ ಪಡೆದಿತ್ತು. ಹೀಗಾಗಿ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದು ಕಾಡಾನೆಗಳನ್ನು ಕಾಡಿಗಟ್ಟಿ ಎಂದು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.