ಮಧುಗಿರಿ: ವಕೀಲ ವೃತ್ತಿ ಇತರರಿಗೆ ನ್ಯಾಯ ಕೊಡಿಸುವ ವೃತ್ತಿಯಾಗಿದ್ದು ಇದು ಮಹತ್ವದ ವೃತ್ತಿಯಾಗಿದೆ ಎಂದು 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಯಾದವ್ ಅಭಿಪ್ರಾಯಪಟ್ಟರು.
ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿರುವ ಬಾರ್ ಅಸೋಸಿಯೇಷನ್ನಲ್ಲಿ ವಕೀಲ ದಿನಾಚರಣೆಯನ್ನು ಗಿಡಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಶಿಕ್ಷಕರು ಮತ್ತು ವಕೀಲರನ್ನು ಜನರು ಗೌರವದಿಂದ ಕಾಣುತ್ತಾರೆ. ಕಕ್ಷಿಧಾರರ ನೋವನ್ನು ವಕೀಲರ ಮುಖದಲ್ಲಿ ನ್ಯಾಯಾಧೀಶರು ಕಾಣುತ್ತಾರೆ. ಹಾಗಾಗಿ ವಕೀಲರು ನ್ಯಾಯಾಲಯದಲ್ಲಿ ಪ್ರಕರಣ ನಡೆಸುವ ರೀತಿಯನ್ನು ಉತ್ತಮಗೊಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಪಿ.ಸಿ. ಕೃಷ್ಣಾರೆಡ್ಡಿ ಮಾತನಾಡಿ – ಇಲ್ಲಿನ ವಕೀಲರ ಸಂಘಕ್ಕೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ವೀರಪ್ಪರವರ ಸಹಕಾರದಿಂದ 2.17 ಯಕರೆ ಜಮೀನು ಲಭ್ಯವಾಗಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳೋಣ ಎಂದರು.
ನ್ಯಾಯಾಧೀಶರುಗಳಾದ ಶಿಲ್ಪಾ, ಪ್ರಮೀಳಾ, ರಘುನಾಥಗೌಡ, ಸೌಮ್ಯಶ್ರೀ ಹಾಜರಿದ್ದರು.ಹಿರಿಯ ವಕೀಲರುಗಳನ್ನು ಮತ್ತು ಕವಿಗಳಾದ ಬಿದಲೋಟಿ ರಂಗನಾಥ ಮತ್ತು ಮಧುಗಿರಿಶಿವದಾಸ್ ರವರನ್ನು ಸನ್ಮಾನಿಸಲಾಯಿತು.