ಬೆಂಗಳೂರು: ಲೋಕಸಭಾ ಚುನಾವಣೆಯ ಅಧಿಸೂಚನೆ ರಾಜ್ಯದಲ್ಲಿ ಹೊರಡಿಸಲು ಕ್ಷಣಗಣನೆ ಆರಂಭಗೊಂಡಿರುವ ಬೆನ್ನಲ್ಲೆ ಕಾಂಗ್ರೆಸ್ ಪಕ್ಷದ ವತಿಯಿಂದ ಅಭ್ಯರ್ಥಿ ಆಯ್ಕೆಗಾಗಿ ತೀವ್ರ ಕಸರತ್ತು ನಡೆದಿದೆ.
ಸಚಿವ ಕೆ. ಎಚ್. ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣಗಳ ನಡುವೆ ನಡೆಯುತ್ತಿರುವ ಗುದ್ದಾಟ ತೀವ್ರ ಗೊಂಡಿದೆ. ಒಂದು ಹಂತದಲ್ಲಿ ಸಚಿವ ಮುನಿಯಪ್ಪ ಸಂಬಂಧಿ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಲಾಗುವುದು…ಎಂಬುದನ್ನು ಗಮನಿಸಿದ ಜಿಲ್ಲೆಯ ಐವರು ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕೋಲಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಮಾಧ್ಯಮವೊಂದರೊಂದಿಗೆ ಮಾತನಾಡುತ್ತಾ ತಮ್ಮ ಅಸಮಾಧಾನವನ್ನು ಹೊರಹಾಕಿ ಈಗಾಗಲೇ ತಾವುಗಳು ವಿಧಾನಸಭಾಧ್ಯಕ್ಷರನ್ನು ಭೇಟಿಯಾಗಲು ಸಮಯ ಕೋರಿದ್ದು, ಐವರು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿದ್ದೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕೊತ್ತೂರು ಮಂಜುನಾಥ ಸೇರಿದಂತೆ ಸಚಿವ ಎಂ.ಸಿ.ಸುಧಾಕರ್, ಮಾಲೂರು ಶಾಸಕ ನಂಜೇಗೌಡ, ವಿಧಾನ ಪರಿಷತ್ ಸದಸ್ಯರಾದ ಅನಿಲ್ಕುಮಾರ್, ನಜೀರ್ ಅಹಮದ್ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಾರೆ ಕೋಲಾರದಲ್ಲಿ ಕಾಂಗ್ರೆಸ್ ಟಿಕೆಟ್ನ ಬಿಕ್ಕಟ್ಟು ಇನ್ನು ಬಗೆಹರಿದಿಲ್ಲ ಎಂದು ತಿಳಿದುಬಂದಿದೆ.