ಬೆಂಗಳೂರು: ತಮ್ಮ ಕ್ಷೇತ್ರ ಅಭಿವೃದ್ಧಿಗೆ ಕಾಮಗಾರಿಯೊಂದರ ಅನುದಾನ ಸಕಾಲಕ್ಕೆ ಬಿಡುಗಡೆಯಾಗುತ್ತಿಲ್ಲ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕ ಅಳಲು ತೋಡಿಕೊಂಡ ಘಟನೆ ವಿಧಾನಸಭೆಯಲ್ಲಿಂದು ನಡೆಯಿತು.
ಮದ್ದೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಉದಯ್ ಕದಕಲೂರು ಅವರು, ತಮ್ಮ ಸ್ವಕ್ಷೇತ್ರ ಮದ್ದೂರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಾಮಗಾರಿಗಳಿಗೆ ಸಕಾಲಕ್ಕೆ ಅನುದಾನ ಸಮರ್ಪಕವಾಗಿ ಬಿಡುಗಡೆಯಾಗುತ್ತಿಲ್ಲ ಎಂದು ಸರ್ಕಾರದ ಗಮನ ಸೆಳೆದರು. ಸಮಾಜ ಕಲ್ಯಾಣ ಇಲಾಖೆಯಿಂದ ಬರಬೇಕಾದ ಅನುದಾನ ಬಾಕಿಯಿದೆ. ಮದ್ದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಶಿಷ್ಟ ಜನಾಂಗದವರು ಇರುವ ಪ್ರದೇಶದ ಅಭಿವೃದ್ಧಿಗಳಿಗೆ ಅನುದಾನ ಬೇಕು ಎಂದು ಒತ್ತಾಯಿಸಿದರು.
ತಾವು ಕ್ಷೇತ್ರಕ್ಕೆ ಹೋಗುವಂತಿಲ್ಲ. ಕ್ಷೇತ್ರಕ್ಕೆ ಹೋದರೆ ಅಲ್ಲಿನ ಜನ ಅಲ್ಲಿ ಅಪೂರ್ಣಗೊಂಡಿರುವ ಕಾಮಗಾರಿಯನ್ನು ತೋರಿಸುತ್ತಾರೆ. ಅಪೂರ್ಣಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಒತ್ತಾಯಿಸಿದರು.
ತಮ್ಮ ಕ್ಷೇತ್ರಕ್ಕೆ ಅನುದಾನ ಬೇಕು. ಇದುವರೆಗೆ ಅನುದಾನ ಕೇಳಿ ಕೇಳಿ ಸಾಕಾಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾನೂನು ಮಿತಿಯೊಳಗೆ ಅನುದಾನ ಬಿಡುಗಡೆ ಮಾಡುವಂತೆ ಅಳಲು ತೋಡಿಕೊಂಡರು.
ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮದ್ದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ೧೪ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ ಹತ್ತು ಕಾಮಗಾರಿ ಪೂರ್ಣಗೊಂಡಿದೆ. ಇನ್ನು ನಾಲ್ಕು ಕಾಮಗಾರಿ ಬಾಕಿಯಿದೆ. ಈ ಕಾಮಗಾರಿ ಪೂರ್ಣಗೊಳ್ಳಲು ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಯಾಗಿ ಶಾಸಕ ಉದಯ್ ನೂರು ಸಲ ಇಲಾಖೆಯಲ್ಲಿ ಹೋಗಿ ಕೇಳಿದ್ದೇನೆ. ಈ ಬಗ್ಗೆ ಸಚಿವರು ಗಮನ ಕೊಡುತ್ತಿಲ್ಲ. ಜನ ನಮ್ಮನ್ನು ಬಿಡುತ್ತಿಲ್ಲ. ಅರ್ಧಬರ್ಧ ಕೆಲಸವಾಗಿದೆ. ಆದಷ್ಟೂ ಬೇಗ ಇದನ್ನು ಪೂರ್ಣಗೊಳಿಸಿ ಎಂದು ಸಚಿವರು ಒತ್ತಾಯಿಸಿದರು.
ಜಿ.ವೈ. ಪದ್ಮನಾಗರಾಜು
ಅನುದಾನಕ್ಕೆ `ಕೈ’ ಶಾಸಕನ ಅಳಲು



