ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ನಟಿಸಿರುವ ‘ಕಲ್ಕಿ 2898AD ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅಮೆಜಾನ್ ಪ್ರೈಮ್ನಲ್ಲಿ ಬಿ&ಬಿ ಬುಜ್ಜಿ ಮತ್ತು ಭೈರವ ಮುನ್ನುಡಿ ಬಿಡುಗಡೆಯಾದ ಬಳಿಕ, ಅಭಿಮಾನಿಗಳು ಈ ಚಿತ್ರದ ಟ್ರೇಲರ್ಗಾಗಿ ಕಾತುರದಿಂದ ಕಾದಿದ್ದರು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ವೈಜಯಂತಿ ಮೂವೀಸ್ ಯೂಟ್ಯೂಬ್ ಚಾನಲ್ನಲ್ಲಿ ಟ್ರೇಲರ್ ರಿಲೀಸ್ ಆಗಿದೆ.
ಭಾರೀ ನಿರೀಕ್ಷೆಯ ಬಳಿಕ, ವೈಜ್ಞಾನಿಕ ಕಾಲ್ಪನಿಕ ಮಹಾಕಾವ್ಯ ‘ಕಲ್ಕಿ 2898AD ‘ ಚಿತ್ರದ ಎರಡು ನಿಮಿಷ ಮತ್ತು ಐವತ್ತೊಂದು ಸೆಕೆಂಡ್ಗಳ ಟ್ರೇಲರ್ ಬಿಡುಗಡೆ ಆಗಿದೆ. ವಿಎಫ್ಎಕ್ಸ್ನಿಂದಲೇ ನೋಡುಗರ ಗಮನ ಸೆಳೆದ ಈ ಸಿನಿಮಾ ತೆಲುಗು ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಇದೀಗ ಟ್ರೇಲರ್ ಸಹ ಎಲ್ಲ ಭಾಷೆಗಳಲ್ಲಿ ಹೊರಬಂದಿದೆ.
ಚಿತ್ರದ ಟ್ರೇಲರ್ ಕುರಿತು ಮಾತನಾಡಿದ ನಿರ್ದೇಶಕ ನಾಗ್ ಅಶ್ವಿನ್, ಇಂದು ನನ್ನ ಹೃದಯವು ಹಲವು ಮಿಕ್ಸ್ಡ್ ಭಾವನೆಗಳಿಂದ ತುಂಬಿದೆ. ಒಬ್ಬ ಚಲನಚಿತ್ರ ನಿರ್ದೇಶಕನಾಗಿ, ನಾನು ಯಾವಾಗಲೂ ಭಾರತೀಯ ಪುರಾಣ ಮತ್ತು ವೈಜ್ಞಾನಿಕ ಕಾದಂಬರಿಗಳಿಂದ ಆಕರ್ಷಿತ ನಾಗಿದ್ದೇನೆ. ಕಲ್ಕಿ 2898AD ಚಿತ್ರದಲ್ಲಿ ಈ ಎರಡು ಅಂಶಗಳನ್ನು ವಿಲೀನಗೊಳಿ ಸಿದ್ದೇವೆ. ನಮ್ಮ ಕಲಾವಿದರು ಮತ್ತು ತಂಡದ ಅಸಾಧಾರಣ ಪ್ರತಿಭೆ ಮತ್ತು ಸಮರ್ಪಣಾ ಮನೋಭಾವದಿಂದ ಕನಸೊಂದು ನನಸಾಗಿದೆ.
ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಲ್ಕಿ 2898AD ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ನಡಿ ಅಶ್ವಿನಿ ದತ್ ನಿರ್ಮಿಸಿರುವ ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಕಲ್ಕಿ 2898AD ಚಿತ್ರವು ಜಗತ್ತಿನಾದ್ಯಂತ ಜೂನ್ 27ರಂದು ಬಿಡುಗಡೆ ಆಗಲಿದೆ.