ಮನಸ್ಸು ಅರಿತು ಮನದ ಕೋರಿಕೆ ತೀರಿಸುವುದು ಪವಾಡವೇ ಸರಿ. ಇಂತಹ ಪವಾಡಗಳನ್ನು ಕಣ್ಣಾರೆ ಕಂಡವರಷ್ಟೇ ಬಲ್ಲರು ದೈವಶಕ್ತಿಯನ್ನು. ಭಕ್ತ ಜನರ ದುಃಖಗಳನ್ನು ದೂರ ಮಾಡುತ್ತಾ ಸುಖವನ್ನು ನೀಡುವ ಪರಮ ಪುಣ್ಯಕ್ಷೇತ್ರ ‘ಶಹಾಬಾದ್ ಕೊಲ್ಲಾಪುರ ಮಹಾಲಕ್ಷ್ಮಿ ಅಮ್ಮ.’ ನಂಬಿದವರ ಪಾಲಿನ ವರದಾತೆ. ಆಡಂಬರವನ್ನು ಬಯಸದೇ ಶ್ರದ್ದೆ ಮತ್ತು ಭಕ್ತಿಗೆ ಒಲಿದು ಹಲವರ ಜೀವನದ ದಾರಿ ದೀಪವಾಗಿದ್ದಾರೆ “ಶಹಾಬಾದ್ ಅಮ್ಮ”.
ಸ್ಥಳ ಮಹಿಮೆ- ಕೊಲ್ಲಾಪುರದ ಶ್ರೀ ಮಹಾಲಕ್ಷ್ಮಿ ತಾನಾಗಿಯೇ ಒಲಿದು ಬಂದಿದ್ದು ಯಾದಗಿರಿಯಲ್ಲಿ ವಾಸಿಸುತ್ತಿದ್ದ ” ಸಂಗೀತ ಅಮ್ಮ”ನವರಿಗೆ. ಸಿರಿವಂತಿಕೆಯ ಹೆಗ್ಗುರುತು ಲಕ್ಷ್ಮೀ. ಸಾಮಾನ್ಯವಾಗಿ ಆಡು ಮಾತಿನಂತೆ ಲಕ್ಮೀದೇವಿ ಬಯಸಿ ಬರುವುದು ಶ್ರೀಮಂತರಿಗೆ ಮಾತ್ರ ಎನ್ನುವರು. ಆದರೆ ಕೊಲ್ಲಾಪುರ ಮಹಾಲಕ್ಷ್ಮಿ ಬಯಸಿ ಬಯಸಿ ಸ್ಥಿರವಾಗಿ ನೆಲೆ ನಿಲ್ಲಲು ಬಯಸಿದ್ದು ಶಹಾಬಾದ್ ಅಮ್ಮನವರ ಮೂಲಕ.
ಸುಮಾರು ಇಪ್ಪತ್ತನಾಲ್ಕು ವರ್ಷಗಳ ಹಿಂದೆ ಮನೆಯಲ್ಲಿ ಇದ್ದ ಲಕ್ಷ್ಮಿ ದೇವಿಯ ಪುಟ್ಟ ಮೂರ್ತಿಯ ಬಳಿ ಹರಶಿಣ ಕುಂಕುಮ ಗೋಚರಿಸುತ್ತಿತ್ತು. ಪ್ರತಿ ದಿನವೂ ಶುಭ್ರವಾಗಿ ಇಡುತ್ತಿದ್ದ ದೇವರ ಮನೆಯಲ್ಲಿ ಹರಶಿಣ ಕುಂಕುಮ ಬರುವುದು ಹೇಗೆ ಎನ್ನುವ ಂi-ಯೋಚನೆ ಅಮ್ಮನಿಗೆ. ಸ್ವಲ್ಪ ದಿನಗಳ ನಂತರ ಕನಸಿನಲ್ಲಿ ನಾನು ನಿನ್ನ ಜೊತೆ ಬರುವೆ ಎನ್ನುವ ಹಾಗೆ ಆಗುತ್ತಿತ್ತು. ಸ್ವಲ್ಪ ಭಯ, ಆತಂಕಗೊಂಡ ಅಮ್ಮ ಮನೆಯ ಹಿರಿಯರ ಬಳಿ ಇದನ್ನು ಹೇಳುತ್ತಾರಂತೆ. ದೇವಿ ಮನೆಗೆ ಬರುತ್ತೇನೆ ಎಂದಾಗ ಬೇಡ ಎನ್ನಬೇಡ ಬರಲು ಹೇಳು ಎನ್ನುತ್ತಾರೆ.
ಸಂಗೀತಮ್ಮನವರ ಪತಿಗೆ ಕೆಲಸದ ವರ್ಗಾವಣೆಯಾಗಿ ಶಹಾಬಾದಿಗೆ ಬಂದು ನೆಲಸುತ್ತಾರೆ. ಚೊಚ್ಚಲ ಬಸುರಿ ಸಂಗೀತಮ್ಮ ಪತಿ ಹಾಗೂ ಕುಟುಂಬದವರ ಜೊತೆಗೆ ಕೊಲ್ಲಾಪುರಕ್ಕೆ ಹೋಗುತ್ತಾರೆ. ಮಹಾಲಕ್ಷ್ಮಿಯನ್ನು ನೋಡಿದ ಅಮ್ಮನಿಗೆ ಮಹದಾನಂದವಾಗುತ್ತದೆ. ಅಲ್ಲಿಯೂ ಒಂದು ಪವಾಡ ನಡೆಯುತ್ತದೆ. ಅದನ್ನು ಕಂಡ ಅಲ್ಲಿನ ಅರ್ಚಕರು ಶಹಾಬಾದ್ ಅಮ್ಮನವರನ್ನು ಮೂಲ ವಿಗ್ರಹದ ಬಳಿ ಕೂರಿಸಿ. ಹರಶಿಣ ಕುಂಕುಮ ಹಾಗೂ ಮಂಗಳ ದ್ರವ್ಯಗಳನ್ನು ಕೊಟ್ಟು ಲಕ್ಷ್ಮಿ ದೇವಿಯ ಪೂರ್ಣ ಫಲ ದೊರೆಯಲೆಂದು ಆಶೀರ್ವಾದ ಮಾಡುತ್ತಾರೆ.
ಶಹಾಬಾದ್ ಅಮ್ಮನವರು ಬಹಳ ಶ್ರದ್ಧೆಯಿಂದ ಲಕ್ಷ್ಮಿ ದೇವಿಯನ್ನು ಆರಾಧಿಸುತ್ತಾರೆ. ಅಮ್ಮನ ಬಳಿ ತಮ್ಮ ಕಷ್ಟಗಳನ್ನು ಪರಿಹರಿಸೆಂದು ಹಲವಾರು ಮಂದಿ ಬರಲು ಆರಂಭಿಸುತ್ತಾರೆ. ಮಂದಹಾಸದಿಂದ ಎಲ್ಲರನ್ನು ಆಧರಿಸುತ್ತಿದ್ದ ಅಮ್ಮ “ಶಹಾದಾದ್ ಅಮ್ಮ” ಎಂದೇ ಹೆಸರುಗಳಿಸುತ್ತಾರೆ. ಕಷ್ಟ ಸುಖಗಳಲ್ಲಿ ಭಾಗಿಯಾಗಿ ನೊಂದವರಿಗೆ ಸಾಂತ್ವನ ಹೇಳಿ ಭಕ್ತರ ಮುಖದಲ್ಲಿ ಸಮಾಧಾನವನ್ನು ತರಿಸುತ್ತಾರೆ. ಇವರನ್ನು ನಂಬಿ ಬಂದವರ ಜೀವನವು ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಮಹಾಲಕ್ಷ್ಮಿ ಮಾತೆ “ನಡೆದಾಡುವ ಶಹಾಬಾದ್ ಅಮ್ಮ”ನ ಮೂಲಕ ಬಯಸಿದ ಭಾಗ್ಯಗಳನ್ನು ಕೊಟ್ಟು ಹರಸುತ್ತಿದ್ದಾರೆ.
ವಿಶೇಷತೆ-ದೇಗುಲದಲ್ಲಿ ಇರುವ ದೇವಿಯದು ಕೃಷ್ಣ ಶಿಲೆಯ ಮೂರ್ತಿ. ಕುಳಿತಿರುವ ಭಂಗಿ ಆಕರ್ಷಕವಾಗಿದೆ.ಭಕ್ತಿ ಮತ್ತು ನಂಬಿಕೆ ಬಹಳ ಮುಖ್ಯ ಎನ್ನುವುದು ಬಹಳಷ್ಟು ಬಾರಿ ಸಾಬೀತಾಗಿದೆ. ಕುಂಕುಮ ಹರಶಿಣಗಳಲ್ಲಿ ದೇವಿಯ ಪುಟ್ಟ ಹೆಜ್ಜೆಗಳು ಮೂಡಿರುತ್ತವೆ.
ಕೊಲ್ಲಾಪುರ ಮಹಾಲಕ್ಷ್ಮಿ ದೇವಾಲಯದಲ್ಲಿ ಪ್ರತಿ ಪೌರ್ಣಮಿ ಮತ್ತು ಅಮಾವಾಸ್ಯೆಗಳಂದು ವಿಶೇಷ ಪೂಜೆಗಳಿರುತ್ತವೆ. ಮಾರ್ಗಶಿರ ಮಾಸದಲ್ಲಿ ನಿರಂತರ ಪೂಜೆಗಳಿರುತ್ತವೆ. ಇಷ್ಟಾರ್ಥವನ್ನು ಕೊಡುತ್ತಾ ಮಹಾಲಕ್ಷ್ಮಿ ಹರುಷದಿ ನೆಲೆಸಿದ್ದಾರೆ.
ಪ್ರತಿ ವರ್ಷ ಮಾಘ ಮಾಸದಲ್ಲಿ ಬಹಳ ವಿಜೃಂಭಣೆಯಿಂದ “ರಥೋತ್ಸವ” ಜರುಗುತ್ತದೆ. ಉತ್ಸವದಲ್ಲಿ ಪಾಲ್ಗೊಳ್ಳಲು ನಾನಾ ಊರುಗಳಿಂದ, ರಾಜ್ಯಗಳಿಂದ ಭಕ್ತರು ಬರುತ್ತಾರೆ. ದೂರದ ಊರುಗಳಿಂದ ಬರುವ ಭಕ್ತರಿಗೆ ಸ್ಥಳೀಯರಾದ ಜಯಶ್ರೀಯವರು ಮತ್ತು ತಮ್ಮ ಕುಟುಂಬದವರು ತಮ್ಮ ಮನೆಯಲ್ಲಿ ಇರಲು ಅವಕಾಶ ಕೊಟ್ಟು ಉಪಚರಿಸುತ್ತಾರೆ. ಪರಿಚಯವೇ ಇಲ್ಲದ ಮಂದಿಯನ್ನು ತಮ್ಮ ಮನೆಯವರಂತೆ ಉಪಚರಿಸುವುದು ನಿಜಕ್ಕೂ ಸಂತಸ, ಆಶ್ಚರ್ಯವಾಗುತ್ತದೆ.