ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲಾಡಳಿತ ದಿಂದ 2023-24 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 11 ಮಂದಿಗೆ ನೀಡಿದ್ದು ಹಿರಿಯ ಪತ್ರಕರ್ತ ಸಿ.ವಿ.ಲಕ್ಷ್ಮಣರಾಜು ಅವರಿಗೆ ಜಿಲ್ಲಾಧಿಕಾರಿ ಡಾ: ರವೀಂದ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಎಂ. ಸಿ. ಸುಧಾಕರ್ ಪ್ರಶಸ್ತಿ ಪತ್ರ,ಫಲ ತಾಂಬೂಲ ನೀಡಿ ಸನ್ಮಾನಿಸಿದರು.
ಸಿ.ವಿ. ಲಕ್ಷ್ಮಣರಾಜು ಪತ್ರಿಕೋದ್ಯಮದಲ್ಲಿ 33 ವರ್ಷಗಳ ಸುದೀರ್ಘ ಪ್ರಯಾಣ ಮಾಡಿದವರು. ಪ್ರಸ್ತುತ ಇಂದು ಸಂಜೆ ದಿನಪತ್ರಿಕೆಯ ಶಿಡ್ಲಘಟ್ಟ ತಾಲೂಕು ವರದಿಗಾರರು. ವೃತ್ತಿಯಡೆಗಿನ ನಿಷ್ಠೆ ಮತ್ತು ಸರಳತೆ ಮತ್ತು ಪುಬುದ್ಧತೆಯನ್ನು ತೋರಿಸುತ್ತಿದೆ. ಕೋಲಾರ ದಿನಪತ್ರಿಕೆಗಳಲ್ಲಿ ಉಪ ಸಂಪಾದಕರಾಗಿ ಬೆಂಗಳೂರು ಎಂಬ ರಾಜಧಾನಿಯಲ್ಲಿ ಕನ್ನಡಪರ ಹೋರಾಟಗಾರರು ಹಿರಿಯ ಪತ್ರಕರ್ತರಾದ ಶ್ರೀ ಜಾಣಗೆರೆ ವೆಂಕಟರಾಮಯ್ಯ ಅವರ ಗರಡಿಯಲ್ಲಿ ಬೆಳೆದು ಈ ಭಾನುವಾರ ಪತ್ರಿಕೆಯ ಸಂಪಾದಕರು ಮತ್ತು ಮುಖ್ಯಮಂತ್ರಿಗಳ ಆಪ್ತಪತ್ರಿಕಾ ಕಾರ್ಯದರ್ಶಿಗಳಾಗಿದ್ದ ಶ್ರೀ ಮಹದೇವ ಪ್ರಕಾಶ್ ಅವರ ಅತ್ಯಾಪ್ತತೆಯನ್ನು ಗಳಿಸಿಕೊಂಡಿದ್ದ ಇವರು ಅಂಬೇಡ್ಕರ್ ವಾಹಿನಿ ಪಾಕ್ಷಿಕ ಪತ್ರಿಕೆಯನ್ನು 25 ವರ್ಷಗಳ ಕಾಲ ಚೈತನ್ಯವಾಗಿ ಉಳಿಸಿಕೊಂಡು ಬಂದವರು.
ಶಿಡ್ಲಘಟ್ಟ ಹಾಗೂ ಹುಟ್ಟಿದ ಊರಿಗೆ ಕರೋನ ಕಾಲಕ್ಕೆ ಮರಳಿದ ಇವರದು ಸುದೀರ್ಘ ಪತ್ರಿಕಾ ಅನುಭವ, ಇಂದು ಸಂಜೆ ದಿನಪತ್ರಿಕೆಯನ್ನು ಶ್ರೀ ವಿ. ನಾಗರಾಜು ಅವರು ಆರಂಭಿಸಿದ ದಿನದಿಂದ ಪತ್ರಿಕೆಯ ಕಚೇರಿಯ ಕೆಲಸದಿಂದ ಹಿಡಿದು ಸುದ್ದಿ ಪರಿಷ್ಕರಣೆ, ಮುದ್ರಣ ಹಾಗೂ ಪತ್ರಿಕೆಗಳ ಬಂಡಲ್ ಗಳ ವಿತರಣೆ ಮಾಡುವವರೆಗೂ ಚಿಕ್ಕಬಳ್ಳಾಪುರ ಜಿಲ್ಲಾ ವರದಿಗಾರರಾಗಿಯೂ ಕರ್ತವ್ಯ ಸಲ್ಲಿಸಿ ಪ್ರಸ್ತುತ ಶಿಡ್ಲಘಟ್ಟದಿಂದ ತಾಲೂಕು ವರದಿಗಾರರಾಗಿ ಮಾದರಿ ವ್ಯಕ್ತಿತ್ವ ಗಳಿಸಿಕೊಂಡಿದ್ದಾರೆ.
ಇಂದು ಸಂಜೆ ದಿನ ಪತ್ರಿಕೆ ಎಂದರೆ ಅವರಿಗೆ ಅತಿಯಾದ ಪ್ರೀತಿ ಹಾಗೂ ಆತ್ಮೀಯತೆ, ವಿ ನಾಗರಾಜು ಅವರು ಕರೋನ ಎರಡನೇ ಅಲೆಯಲ್ಲಿ ಅಸ್ತಂಗತರಾದ ನಂತರ ಪತ್ರಿಕೆಯನ್ನು ನಿಲ್ಲದಂತೆ ಮುನ್ನಡೆಸಿಕೊಂಡು ಹೋಗುತ್ತಿರುವ ಅವರ ಧರ್ಮಪತ್ನಿ ಡಾ. ಜಿ. ವೈ. ಪದ್ಮ ವಿ ನಾಗರಾಜು ಮತ್ತು ಅವರ ಪುತ್ರರಾದ ಶ್ರೀ ಅಜಿತ್ ಸಾಗರ್ ಅವರ ಶ್ರಮ ಹಾಗೂ ಬದ್ಧತೆ ಸದಾ ಸ್ಮರಣೀಯ ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಹಾಯ್ ಬೆಂಗಳೂರ್ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿ ರವಿ ಬೆಳಗೆರೆ ಅವರ ಸ್ನೇಹ ಗೆಳೆತನಕ್ಕೆ ಸಾಕ್ಷಿಯಾಗಿ ಪತ್ರಿಕೆಯಲ್ಲಿಯೂ ಸೇವೆ ಸಲ್ಲಿಸಿದವರು, ಅಂಬೇಡ್ಕರ್ ವಾಹಿನಿ ಪತ್ರಿಕೆಯ ಅಸಂಖ್ಯಾತ ಲೇಖನಗಳು ಸಂಪಾದಿಕೀಯ ಲೇಖನಗಳನ್ನು ಬರೆದವರು, ಮಾರ್ದನಿ ಪತ್ರಿಕೆಗೆ ಮಾಡಿದ ವರದಿಯೊಂದರಿಂದ ನ್ಯಾಯಾಲಯದ ಮುಂದೆ ನಿಂತು ಪತ್ರಿಕಾ ಬರಹದ ಶಕ್ತಿ ನಿರೂಪಿಸಿ ಬಡವರಿಗೆ ಉಚಿತ ವಸತಿ ನಿವೇಶನಗಳನ್ನು ಕೊಡಿಸಿದ ತೃಪ್ತಿ ಅವರದು.
ಕೋಲಾರ ಜಿಲ್ಲೆಯಿಂದ ಪುಕಟವಾಗುವ ದಿನಪತ್ರಿಕೆಗಳಾದ ಸಂಚಿಕೆ ಮತ್ತು ಪ್ರಿಯಾ ಪತ್ರಿಕೆಗಳಲ್ಲಿ ಉಪ ಸಂಪಾದಕರಾಗಿ ಹಲವು ವರ್ಷಗಳ ಕಾಲ ದುಡಿದವರು, ಹೊಸದಿಗಂತ, ವಾರ್ತಾಭಾರತಿ ದಿನಪತ್ರಿಕೆಗಳಿಗೆ ವರದಿಗಾರರಾಗಿಯೂ ಕೆಲಸ ಮಾಡಿದ್ದಾರೆ. ನಾಡಿನ ಖ್ಯಾತರಾದ ಎನ್ ‘ರಾಚಯ್ಯ ಅವರ ಜೀವನ ಮತ್ತು ಸಾಧನೆ ಕುರಿತ ದಲಿತ ಧ್ವನಿ ಎನ್ ರಾಚಯ್ಯ ಕೃತಿಯ ರಚನೆ ಸೇರಿದಂತೆ ಡಾ’ ಎಲ್ ಹನುಮಂತಯ್ಯ ಅವರ ಅಂಬೇಡ್ಕರ್ ಮತ್ತು ಸ ಮಕಾಲೀನತೆ,
ಕೃತಿಯ ಕರಡು ತಿದ್ದುವ ಕಾರ್ಯ ಮತ್ತು ಅವರ ಅನೇಕ ಕೃತಿಗಳ ಸಂಗ್ರಹಣೆಗೆ ಹೆಗಲು ಕೊಟ್ಟಿದ್ದಾರೆ ದಲಿತ ಚಳುವಳಿಯ ಚರಿತ್ರೆಯನ್ನು ದಾಖಲು ಮಾಡಿದ ಮೈಸೂರಿನ ಡಾ ; ವಿ ಮುನಿವೆಂಕಟಪ್ಪ ಅವರ ಕೃತಿಯೊಂದಕ್ಕೆ ಮುನ್ನುಡಿಯನ್ನು ಬರೆದು ಕೊಟ್ಟವರು, ಖ್ಯಾತ ರಂಗ ತಜ್ಞರಾದ ಪ್ರೋಫೆಸರ್ ಸಿ.ಜಿ, ಕೃಷ್ಣಸ್ವಾಮಿ ಅವರ ಆಪ್ತರಾಗಿ ಸಿರಿ ಸಂಪಿಗೆ ಕಂಬಾರ 60.ಕಾರ್ಯಕ್ರಮ ಸಂಘಟನೆ ಸೇರಿದಂತೆ ಡಾ: ಎಲ್. ಹನುಮಂತಯ್ಯ ಅವರ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಾಟಕ ರಚನೆಯಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ.
ಕರ್ನಾಟಕ ಪತ್ರಿಕಾ ಅಕಾಡೆಮಿಯ ಅಧ್ಯಕ್ಷರಾಗಿದ್ದ ಹಿರಿಯ ಪತ್ರಕರ್ತರಾದ ಆರ್ ಪಿ, ಜಗದೀಶ್, ಅರ್ಜುನ ದೇವ ಹಾಗೂ ಎಚ್ ಪಿ. ದಿನೇಶ್ ಕುಮಾರ್ ಅವರ ಅವಧಿಗಳಲ್ಲಿ ನಡೆದ ಅನೇಕ ಪತ್ರಿಕಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮೆಚ್ಚುಗೆ ಪತ್ರಗಳನ್ನು ಪಡೆದವರು ಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತದಿಂದ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಮತ್ತು ಡಾಕ್ಟರ್ ಬಾಬು ಜಗಜೀವನ್ ರಾಮ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ನಿರಂತರ ಮೂರು ಅವಧಿಗೆ ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ದೌರ್ಜನ್ಯ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಪುನರ್ವಸತಿ ಸಮಿತಿ ಸದಸ್ಯರಾಗಿರುವ ಸಿ.ವಿ, ಲಕ್ಷ್ಮಣ ರಾಜು ಅವರು ಇಂದು ಸಂಜೆ ಪತ್ರಿಕೆ ಸಂವೇದನೆಯನ್ನು ಗ್ರಹಿಸಿ ಇಂದು ಸಂಜೆ ಪತ್ರಿಕೆಯಲ್ಲಿ ಮೌಲ್ಯಯುತ ವರದಿಗಳನ್ನು ಮಾಡುವ ಮೂಲಕ ಸಮಾಜ ಶಾಸ್ತ್ರೀಯ ಅಧ್ಯಯನಕ್ಕೆ ಪೂರಕವಾದ ಅಂಶಗಳನ್ನು ಕಟ್ಟಿಕೊಟ್ಟಿರುವ ಧನ್ಯತೆ ಅವರಿಗೆ ಇದೆ.
ಹೀಗಾಗಿ ಇಂದು ಸಂಜೆ ದಿನಪತ್ರಿಕೆ ಸಮಾಜ ಶಾಸ್ತ್ರೀಯ ಅಧ್ಯಯನಕ್ಕೆ ಪೂರಕವಾದ ವರದಿಗಳನ್ನು ದಾಖಲಿಸುವ ಮೂಲಕ ಸಮಾಜಕ್ಕೆ ಅತ್ಯುತ್ತಮ ಮಾರ್ಗದರ್ಶನ ಹಾಗೂ ಕೊಡುಗೆಯನ್ನು ನೀಡಿದೆ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು. ಇವರಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ 2023-24 ನೇರ ಸಾಲಿನ ಸುವರ್ಣ ಕನ್ನಡ ರಾಜ್ಯೋತ್ಸವ ಸಮಾರಂಭದ ವೇದಿಕೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.