ಬೆಂಗಳೂರು: “ಕೇವಲ ನವೆಂಬರ್ ತಿಂಗಳಿನಲ್ಲಿ ಕನ್ನಡ ಬಾವುಟ ಕಟ್ಟಿ, ಭುವನೇಶ್ವರಿಯ ಫೋಟೋ ಇಟ್ಟು, ಅರಿಶಿನ ಕುಂಕುಮ ಹಚ್ಚಿ, ದೀಪ ಬೆಳಗಿ ಕೈಮುಗಿದರೆ ಕನ್ನಡ ಬೆಳೆಯುವುದಿಲ್ಲ. ನೀವೆಲ್ಲರೂ ಕನ್ನಡ ಸಾಹಿತ್ಯವನ್ನು ಓದಬೇಕು, ಪತ್ರಿಕೆಗಳನ್ನು ಓದಬೇಕು, ದಿನನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ಬಳಸಬೇಕು. ಆಗ ಮಾತ್ರ ಕನ್ನಡ ಉಳಿಯಲು, ಬೆಳೆಯಲು, ಬೆಳಗಲು ಸಾಧ್ಯ.” ಎಂದು ಆದರ್ಶ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಪುಷ್ಪ ವಿಶ್ವೇಶ್ವರ ಅವರು ಹೇಳಿದರು.
ಕೋಣನಕುಂಟೆಯಲ್ಲಿರುವ ಆದರ್ಶ ಮಹಿಳಾ ವೇದಿಕೆಯ ವತಿಯಿಂದ ಆಚರಿಸಲಾದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅವರು ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು “ನಮ್ಮ ವೇದಿಕೆಯ ಬಗ್ಗೆ ಮಣ್ಣೆ ಮೋಹನ್ ರವರು ಪುಸ್ತಕವನ್ನು ಬರೆದಿದ್ದಾರೆ. ಅದನ್ನು ನಮ್ಮ ವೇದಿಕೆಯ ಸದಸ್ಯರು ಎಷ್ಟು ಜನ ಓದಿದ್ದೀರಾ ಕೇವಲ ಬರವಣಿಗೆಯಷ್ಟು ಮಾತ್ರ.
ಏಕೆ ನಮ್ಮಲ್ಲಿ ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆ ಎಂಬುದಕ್ಕೆ ಇದು ಸಂಕೇತ. ನಾವು ಯಾವಾಗಲೂ ಆದರ್ಶವಾಗಿರಬೇಕು. ಹಾಗಾಗಿ ಇಂದೇ ಆ ಪುಸ್ತಕವನ್ನು ಎಲ್ಲರೂ ಕೊಂಡು ಓದಿರಿ” ಎಂದು ಪುಸ್ತಕ ಪ್ರೀತಿಯ ಮಹತ್ವವನ್ನು ಸಾರಿದರು. ಬಿಂಬ ಸಾಹಿತಿ ಬರೆದಿರುವ ಕಂಬ ಸಾಹಿತ್ಯದ ವಿಶೇಷದ ಬಗ್ಗೆ ಉಲ್ಲೇಖಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಲೇಖಕ ಚಿಂತಕ ಅಂಕಣಕಾರ ಮಣ್ಣೆ ಮೋಹನ್ ಅವರು “ಸೈನಿಕನೊಬ್ಬನ ಹೆಂಡತಿಯಾದ ಒನಕೆ ಓಬವ್ವ, ಒನಕೆ ಕೈಯಲ್ಲಿ ಹಿಡಿದು ವೈರಿ ಪಡೆಯನ್ನು ಚಚ್ಚಿ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ್ದು; ಕಿತ್ತೂರು ಚೆನ್ನಮ್ಮ ಬ್ರಿಟಿಷ್ ಅಧಿಕಾರಿಗೆ ನಿಮಗೇಕೆ ಕೊಡಬೇಕು ಕಪ್ಪ ಎಂದು ಘರ್ಜಿಸಿದ್ದು;
ಕನ್ನಂಬಾಡಿ ಕಟ್ಟಲು, ಮೈಸೂರು ಮಹಾರಾಣಿ ತನ್ನ ಒಡವೆಯನ್ನೆಲ್ಲ ತ್ಯಾಗ ಮಾಡಿದ್ದು, ಸಮಕಾಲೀನ ಬದುಕಿನಲ್ಲಿರುವ ಸುಧಾಮೂರ್ತಿಯವರ ಅನನ್ಯವಾದ ಸಾಮಾಜಿಕ ಸೇವೆಗಳನ್ನು ಉಲ್ಲೇಖಿಸುತ್ತಾ, ಇವುಗಳೆಲ್ಲ ಈ ನಾಡಿನ ಹೆಣ್ಣುಮಕ್ಕಳ ಧೈರ್ಯ, ಸಾಹಸ, ತ್ಯಾಗ ಮನೋಭಾವಕ್ಕೆ ಸಾಕ್ಷಿಯಾಗಿವೆ. ಈ ವೇದಿಕೆಯ ಅಧ್ಯಕ್ಷರಾದ ಪುಷ್ಪ ವಿಶ್ವೇಶ್ವರ ರವರು ಇದೇ ಹಾದಿಯಲ್ಲಿ ಸಾಗುತ್ತಾ ಅನೇಕ ಹೆಣ್ಣು ಮಕ್ಕಳ ಜೀವನವನ್ನು ಉಜ್ವಲಗೊಳಿಸಿದ್ದಾರೆ. ಅವರ ಹೆಗಲಿಗೆ ಹೆಗಲು ಕೊಟ್ಟಿರುವ ನೀವೆಲ್ಲರೂ ಸಹ ಅಭಿನಂದನಾರ್ಹರು” ಎಂದರು.
ಇದೇ ವೇಳೆ ನೆಲಮಂಗಲ ತಾಲ್ಲೂಕು ಕಸಾಪ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಮಾತನಾಡಿ ಜೀವನದಲ್ಲಿ ಮಾತೆಯರ ಮಹತ್ವದ ಬಗ್ಗೆ ತಿಳಿಸಿದರು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮೂರ್ತಿ ಮಾತನಾಡಿ ಮಹಿಳೆಯರಿಗೆ ಇನ್ನೂ ಏಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿಲ್ಲ ಎಂದು ಪ್ರಶ್ನಿಸಿದರು, ನಗರ ಅಧ್ಯಕ್ಷ ಮಲ್ಲೇಶ್ ಮಾತನಾಡಿ ಆದರ್ಶ ಮಹಿಳಾ ವೇದಿಕೆಯ ಕಾರ್ಯವನ್ನು ಶ್ಲಾಘಿಸಿದರು.
ವೇದಿಕೆ ಅಧ್ಯಕ್ಷರಾದ ವನಿತಾ ರಾಮಸ್ವಾಮಿಯವರು ಮಾತನಾಡಿ ಅಂತರಾಷ್ಟ್ರೀಯ ಮಟ್ಟದ ಗಣಕಯಂತ್ರದ ಬಗೆಗಿನ ಪ್ರಬಂಧಕ್ಕಾಗಿ ಪ್ರಥಮ ಬಹುಮಾನ ಪಡೆದ ತಮ್ಮ ಅನುಭವವನ್ನು ಹಂಚಿಕೊಂಡರು. ಸಾಮೂಹಿಕ ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಣಿ ಮತ್ತು ನಾಗರತ್ನರವರು ಶೀರ್ಷಿಕೆ ಗೀತೆ ಹಾಡಿದರು. ಇಂದಿರಾ ರವರು ಸ್ವಾಗತ ಕೋರಿದರು. ಸುಚಿತ್ರ ನಿರೂಪಿಸಿದರು. ಕನ್ಯಾಕುಮಾರಿ ವಂದನಾರ್ಪಣೆ ನರವೇರಿಸಿದರು.