ವೆಸ್ಟ್ ಇಂಡೀಸ್ ವಿರುದ್ಧ ಅಜೇಯ ಶತಕ ಬಾರಿಸುವ ಮೂಲಕ ತಮ್ಮ ಟೆಸ್ಟ್ ಶತಕಗಳ ಗಳಿಕೆಯನ್ನು ೬ಕ್ಕೇರಿಸಿಕೊಂಡಿರುವ ರವೀಂದ್ರ ಜಡೇಜಾ ಅವರು ಇದೀಗ ವಿಶ್ವಶ್ರೇಷ್ಠ ಆಲ್ರೌಂಡರ್ ಗಳಾದ ಕಪಿಲ್ ದೇವ್ ಮತ್ತು ಇಮ್ರಾನ್ ಖಾನ್ ಅವರ ಸಾಲಿಗೆ ಸೇರಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ೬ ಮತ್ತು ಅದಕ್ಕಿಂತ ಹೆಚ್ಚಿನ ಶತಕಗಳ ಜೊತೆಗೆ ೩೦೦ಕ್ಕೂ ಹೆಚ್ಚು ವಿಕೆಟ್ ಗಳನ್ನು ಪಡೆದ ೬ನೇ ಆಲ್ರೌಂಡರ್ ಎಂಬ ಗೌರವಕ್ಕೆ ಇದೀಗ ಪಾತ್ರರಾಗಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ೨ನೇ ದಿನಾಂತ್ಯಕ್ಕೆ ಭಾರತ ತಂಡ ೫ ವಿಕೆಟ್ ನಷ್ಟಕ್ಕೆ ೪೪೮ ರನ್ ಗಳಿಸಿದ್ದು ಈಗಾಗಲೇ ೨೮೬ ರನ್ ಪ್ರಥಮ ಮುನ್ನಡೆಯೊಂದಿಗೆ ಸುಸ್ಥಿತಿಯಲ್ಲಿದೆ. ೧೦೪ ರನ್ ಗಳಿಸಿರುವ
ರವೀಂದ್ರ ಜಡೇಜಾ ಮತ್ತು ೯ ರನ್ ಗಳಿಸಿರುವ ವಾಶಿಂಗ್ಟನ್ ಸುಂದರ್ ಅವರು ಶನಿವಾರಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ೩೬ ವರ್ಷದ ರವೀಂದ್ರ ಜಡೇಜಾ ಅವರು ೮೬ ಟೆಸ್ಟ್ ಪಂದ್ಯಗಳಿಂದ ೩೯೯೦ ರನ್ ಮತ್ತು ೩೩೦ ವಿಕಟ್ ಗಳಿಸಿದ್ದಾರೆ. ಜೊತೆಗೆ ಆರು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ.
ಈ ಗೌರವಾನ್ವಿತ ಪಟ್ಟಿಯಲ್ಲಿ ಇಂಗ್ಲೆಂಡ್ನ ಇಯಾನ್ ಬೋಥಮ್ , ಭಾರತದ ಕಪಿಲ್ ದೇವ್, ರವಿ ಅಶ್ವಿನ್, ಪಾಕಿಸ್ತಾನದ ಇಮ್ರಾನ್ ಖಾನ್ ಮತ್ತು ನ್ಯೂಜಿಲೆಂಡ್ನ ಡೇನಿಯಲ್ ವೆಟ್ಟೋರಿ ಇದ್ದಾರೆ. ರವೀಂದ್ರ ಜಡೇಜಾ ಅವರು ಈ ಪಟ್ಟಿಗೆ ಸೇರ್ಪಡೆಯಾದ ಆರನೇ ಕ್ರಿಕೆಟಿಗರಾಗಿದ್ದಾರೆ. ಇದೇವೇಳೆ ಈಗ ಮತ್ತೊಂದು ದೊಡ್ಡ ಮೈಲಿ ಗಲ್ಲು ತಲುಪುವ ಸನಿಹದಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ೪೦೦೦ ರನ್ಗಳು ಮತ್ತು ೩೦೦ಕ್ಕೂ ಹೆಚ್ಚು ವಿಕೆಟ್ಗಳನ್ನು ಪಡೆದ
ನಾಲ್ಕನೇ ಕ್ರಿಕೆಟಿರೆನ್ನಿಸಿಕೊಳ್ಳಲು ಅವರಿಗೆ ಕೇವಲ ೧೦ ರನ್ ಗಳಷ್ಟೇ ಬೇಕಾಗಿವೆ. ಪ್ರಸ್ತುತ, ಈ ವಿಶೇಷ ಪಟ್ಟಿಯಲ್ಲಿ ಮೂವರು ಕ್ರಿಕೆಟಿಗರು ಮಾತ್ರ ಇದ್ದಾರೆ.
ಭಾರತದ ಕಪೀಲ್ ದೇವ್, ಇಂಗ್ಲೆಂಡ್ನ ಇಯಾನ್ ಬೋಥಮ್ ಮತ್ತು ನ್ಯೂಜಿಲೆಂಡ್ನ ಡೇನಿಯಲ್ ವೆಟ್ಟೋರಿ ಈ ಸಾಧನೆ ಮಾಡಿದವರಾಗಿದ್ದಾರೆ. ಜಡೇಜಾ ಅವರು ಈ ಪಟ್ಟಿಗೆ ಸೇರ್ಪಡೆಯಾದರೆ, ಅದು ಅವರ ವೃತ್ತಿಜೀವನದ ಮತ್ತೊಂದು ದೊಡ್ಡ ಸಾಧನೆಯಾಗಿ ಪರಿಗಣಿಸಲ್ಪಡಲಿದ್ದಾರೆ.
ದ್ವಿಶತಕದ ಜೊತೆಯಾಟ ಭಾರತ ತಂಡ ೨೧೮ ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡ ನಂತರ ಕ್ರೀಸಿಗೆ ಆಗಮಸಿದ ರವೀಂದ್ರ ಜಡೇಜಾ ಅವರು ಧ್ರುವ್ ಜ್ಯುರೆಲ್ ಅವರೊಂದಿಗೆ ಐದನೇ ವಿಕೆಟ್ಗೆ ೨೦೬ ರನ್ಗಳ ಬೃಹತ್ ಜೊತೆಯಾಟವನ್ನು ಕಟ್ಟಿದರು. ಈ ಜೊತೆಯಾಟದಿಂದಾಗಿ ಭಾರತ ತಂಡ ಟೆಸ್ಟ್
ಪಂದ್ಯದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದೆ. ಜ್ಯುರೆಲ್ ಅವರು ೨೧೦ ಎಸೆತಗಳಿಂದ ೧೫ ಬೌಂಡರಿ ಮತ್ತು ೩ ಸಿಕ್ಸರ್ ಗಳನ್ನು ಒಳಗೊಂಡ
೧೨೫ ರನ್ಗಳನ್ನು ಗಳಿಸಿದರು ಜಡೇಜಾ ಅವರು ೧೭೬ ಎಸೆತಗಳಲ್ಲಿ ೧೦೪ ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಇನಿಂಗ್ಸ್ ನಲ್ಲಿ ೬ ಬೌಂಡರಿ
ಮತ್ತು ೫ ಸಿಕ್ಸರ್ ಗಳಿವೆ. ಇದಕ್ಕೂ ಮೊದಲು ಕೆಎಲ್ ರಾಹುಲ್ ಅವರು ಸಹ ಶತಕ ಗಳಿಸಿದ್ದರು.