ಹೊಸಕೋಟೆ: ನಗರದಲ್ಲಿ ಗುರುವಾರ ರಾತ್ರಿ ಧರ್ಮರಾಯಸ್ವಾಮಿ ದ್ರೌಪದಮ್ಮನವರ ಕರಗ ಮಹೋತ್ಸವ ವೈಭವದಿಂದ ನಡೆಯಿತು.ಮೇಲಿನಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದ್ರೌಪದಮ್ಮನವರ ದೇವಾಲಯದಿಂದ ರಾತ್ರಿ ಸುಮಾರು 2 ಗಂಟೆಗೆ ಹೊರಟ ಕರಗ ಕೆ.ಆರ್.ಬಡಾವಣೆ,
ವಿಶ್ವೇಶ್ವರಯ್ಯ ಬಡಾವಣೆಯ ಪಟಾಲಮ್ಮ ದೇವಾಲಯ, ಗಂಗಮ್ಮದೇವಿ ದೇವಾಲಯಗಳಿಗೆ ತೆರಳಿ ಪೂಜೆ ಸ್ವೀಕರಿಸಿ, ತಮ್ಮೇಗೌಡ ಬಡಾವಣೆ, ಸ್ವಾಮಿ ವಿವೇಕಾನಂದನಗರ, ರಾಯಸಿಂಗ್ ಬಡಾವಣೆ, ಕೋಟೆ, ಬ್ರಾಹ್ಮಣರ ಬೀದಿ, ಗಾಣಿಗರಪೇಟೆ, ಕುರುಬರಪೇಟೆ ಮೂಲಕ ದೇವಾಲಯಕ್ಕೆ ಶುಕ್ರವಾರ ಬೆಳಿಗ್ಗೆ ಸೇರಿತು. ಮಾರ್ಗದುದ್ದಕ್ಕೂ ಭಕ್ತಾಧಿಗಳಿಂದ ಕರಗಕ್ಕೆ ಪೂಜೆ ನೆರವೇರಿಸಲಾಯಿತು.
ಎರಡನೇ ಬಾರಿಗೆ ಕರಗವನ್ನು ಟಿ.ಶೈಲೇಂದ್ರ ಯಶಸ್ವಿಯಾಗಿ ಹೊತ್ತು ಸಾರ್ವಜನಿಕರಿಂದ ಪ್ರಶಂಸೆ ಪಡೆದರು.ಕರಗವನ್ನು ವೀಕ್ಷಿಸಲು ನಗರವಷ್ಟೇ ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಗ್ರಾಮಸ್ಥರು ಸಹ ಆಗಮಿಸಿದ್ದರು.
ದೇವಾಲಯದಲ್ಲಿ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಶಾಸಕ ಶರತ್ ಬಚ್ಚೇಗೌಡ, ದೇವಾಲಯ ಸಮಿತಿ ಅಧ್ಯಕ್ಷ ಎಚ್.ಜೆ.ಶ್ರೀನಿವಾಸ್, ಉಪಾಧ್ಯಕ್ಷ ಉಪಾಧ್ಯಕ್ಷ ಯಜಮಾನ್ ರಾಜಣ್ಣ, ಕಾರ್ಯದರ್ಶಿ ಎಚ್.ಎ.ಕೃಷ್ಣಪ್ಪ, ಸಹಕಾರ್ಯದರ್ಶಿ ಗಣಚಾರಿ ಮುನಿಶಾಮಣ್ಣ, ಖಜಾಂಚಿ ಎಚ್.ಕೆ.ಮೋಹನ್, ಧರ್ಮದರ್ಶಿಗಳು ಭಾಗವಹಿಸಿದ್ದರು.