ಮೈಸೂರು: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತು ಮೈಸೂರು ರಂಗಾಯಣದ ಮಾಜಿ ನಿರ್ದೆಶಕರೂ ಆದ ಹಿರಿಯ ರಂಗ ಕರ್ಮಿ ಅಡ್ಡಂಡ ಕಾರ್ಯಪ್ಪ ಸಿ.ಕಾರ್ಯಪ್ಪ ರಚಿಸಿರುವ ‘ಕರಿನೀರ ವೀರ’ ನಾಟಕ ಇಂದು (ಅ.30) ಸಂಜೆ 6 ಗಂಟೆಗೆ ಮೈಸೂರಿನ ಕಿರು ರಂಗ ಮಂದಿರದಲ್ಲಿ ಪ್ರದರ್ಶನವಾಗುತ್ತಿದ್ದು, ಬಹು ನಿರೀಕ್ಷಿತವಾದ ಈ ನಾಟಕಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಈಗಾಗಲೇ ಟಿಕೆಟ್ ಹೌಸ್ಫುಲ್ ಆಗಿದೆ.
ಅಲ್ಲದೇ ನವೆಂಬರ್ 7 ಮತ್ತು 8ರಂದು ಈ ನಾಟಕವನ್ನು ಮೈಸೂರಿನ ಕಲಾಮಂದಿರದಲ್ಲಿ ಪ್ರದರ್ಶಿಸಲಾಗುವುದು ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ. “ಕರಿನೀರ ವೀರ” ಒಂದು ನಾಟಕವಷ್ಟೆ ಎಂದಿರುವ ಅಡ್ಡಂಡ ಕಾರ್ಯಪ್ಪ, ಇದು ಒಬ್ಬ ಅಸದೃಶ ವ್ಯಕ್ತಿಯ ಜೀವನ ದರ್ಶನ ಕಥೆ ಮತ್ತು ಇತಿಹಾಸ ಎರಡೂ ಆಗಿದ್ದು, ಈ ನಾಟಕವನ್ನು ಬರೆಯಲು ನಿರ್ಧರಿಸಿದಾಗ ಸ್ವತಃ ಸಾವರ್ಕರ್ ಅವರು ಬರೆದಿರುವ ಆತ್ಮಚರಿತ್ರೆ, ಕಥೆ, ಕಾವ್ಯ, ಕಾದಂಬರಿ ಮತ್ತು ಪುಸ್ತಕಗಳನ್ನು ಓದಿ ಸಾವರ್ಕರ್ ಅವರನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದೇನೆ.
ಸಾವರ್ಕರ್ ಬಗ್ಗೆ ವಿದ್ಯಾನಂದ ಶೆಣೈ ಅವರು ಮಾಡಿರುವ ಉತ್ಕೃಷ್ಟ ಭಾಷಣಗಳನ್ನು ಕೇಳಿದ್ದೇನೆ. ಈ ನಾಟಕಕ್ಕೆ ಮುಖ್ಯ ಅಕರ ‘ಆತ್ಮಾಹುತಿ’ ಪುಸ್ತಕ ಮತ್ತು ಧನಂಜಯ್ ಕೀರ್ ಅವರು ಬರೆದಿರುವ ‘ವೀರ್ ಸಾವರ್ಕರ್ ಅಂಡ್ ಈಸ್ ಟೈಮ್ಸ್’ ಪುಸ್ತಕ. ಇದನ್ನು ಖ್ಯಾತ ಸಾಹಿತಿ ಜಿ.ಬಿ.ಹರೀಶ್ ಅನುವಾದ ಮಾಡಿದ್ದಾರೆ ಎಂದು ತಿಳಿಸಿರುವ ಕಾರ್ಯಪ್ಪ ನಾಟಕ ಎಂದರೆ ಸಿನಿಮಾ ಅಲ್ಲ. ಇಲ್ಲಿ ಅನೇಕ ಮಿತಿಗಳು ಕಾಡುತ್ತವೆ. ಈ ಮಿತಿಗಳ ಅಡಿಯಲ್ಲಿ ನಾಟಕ ರಚಿಸಿದ್ದೇನೆ. ಇದು ತಾಯಿ ಭಾರತೀಯಳ ಸುಪುತ್ರರಾದ ಸಾವರ್ಕರ್ ನುಡಿ ನಮನಗಳನ್ನು ಕಲಾರಾಧನೆಯಿಂದ ಭಾವಜಾಗರಣದಿಂದ ಅರ್ಪಿಸುವ ರಂಗ ಕ್ರಿಯೆ ಆಗಿದೆ ಎಂದು ತಿಳಿಸಿದ್ದಾರೆ.
ಸಾವರ್ಕರ್ ಅವರು ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ ಎಂದು ಘೋಷಿಸಿದ್ದ ಪ್ರಥಮ ರಾಜಕೀಯ ಮುಂದಾಳು ಎಂದು ತಿಳಿಸಿರುವ ಕಾರ್ಯಪ್ಪ ಅವರು ರಚಿಸಿದ ಸ್ವಾತಂತ್ರ್ಯ ಸಂಗ್ರಾಮ ಗ್ರಂಥವನ್ನು ಪ್ರಕಟಣೆಗೆ ಮುನ್ನವೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟಿತ್ತು. ವಿಶ್ವದ ರಾಜಕೀಯ ಚರಿತ್ರೆಯಲ್ಲಿ 50 ವರ್ಷಕಾಲ ಕರಿನೀರಿನ ಶಿಕ್ಷೆಗೆ ಗುರಿಯಾದ ಏಕೈಕ ರಾಜಕೀಯ ಸೆರೆಯಾಳು ಸಾವರ್ಕರ್. ಯಾವುದೇ ಸೌಲಭ್ಯವನ್ನು ನೀಡದಿದ್ದರೂ ಸೆರೆಮನೆಯ ಗೋಡೆಗಳ ಮೇಲೆ ಮೊಳೆಯಿಂದಲೇ 10 ಸಹಸ್ರ ಸಾಲುಗಳ ಕಾವ್ಯ ರಚಿಸಿದ ಮಹಾಕವಿ ಅವರು ಎಂದು ತಿಳಿಸಿದ್ದಾರೆ.
ರಾಷ್ಟ್ರದ ಹಿತ, ರಾಷ್ಟ್ರೀಯತೆ, ಐಕ್ಯತೆ, ರಾಷ್ಟ್ರದ ಗೌರವವನ್ನು ಬಯಸಿದ ಏಕೈಕ ವ್ಯಕ್ತಿಯಾಗಿದ್ದ ಸಾವ ಯಾವುದೇ ಪ್ರಶಸ್ತಿ, ಗೌರವಗಳನ್ನು ಬಯಸದ ನಾಯಕರು. 1910 ರಿಂದ 1937 ರವರೆಗೆ ಸಾವರ್ಕರ್ ಬಂಧನ, ಸೆರೆವಾಸ ನಂತರವೂ ಪದೇ ಪದೇ ಅವರಿಗೆ ಹಿಂಸೆ ನೀಡಲಾಯಿತು. ಸಾವರ್ಕರ್ ಅವರ ಜೀವನ ಚರಿತ್ರೆಯ ಪುಸ್ತಕಗಳನ್ನು ಓದುವಾಗ ಭಾವುಕವಾಗಿ ಅತ್ತು ನಿರಾಳನಾಗಿದ್ದೇನೆ. ಈ ಮಹಾನ್ ಚೇತನವನ್ನು ಎಲ್ಲರ ಮನಸ್ಸಿಗೆ ರಂಗರೂಪದಲ್ಲಿ ಮುಟ್ಟಿಸಬೇಕೆಂಬ ತುಡಿತವೇ ತಾವು ಈ ನಾಟಕ ಬರೆಯಲು ಕಾರಣ ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ.