ಮಡಿಕೇರಿ: ಕರ್ನಾಟಕ ಸೇರಿದಂತೆ 8 ರಾಜ್ಯಗಳ ತಂಡಗಳು, ಕೊಡಗಿನಲ್ಲಿ ನಡೆಯುತ್ತಿರುವ 67ನೇ ರಾಷ್ಟ್ರಮಟ್ಟದ, ಶಾಲಾ ಬಾಲಕಿಯರ ಹಾಕಿ ಟೂರ್ನಿಯಲ್ಲಿ ಶುಕ್ರವಾರ ಕ್ವಾರ್ಟರ್ ಫೈನಲ್ ಪ್ರವೇಶಿಸಿದವು. ಕರ್ನಾಟಕವು 6-0ಯಿಂದ ಛತ್ತೀಸಗಢ ತಂಡವನ್ನು ಮಣಿಸಿತು.
ಇದಕ್ಕೂ ಮುನ್ನ ನಡೆದ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡವು ಕೆವಿಎಸ್ (ಕೇಂದ್ರೀಯ ವಿದ್ಯಾಲಯ ಸಂಘಟನೆ) ತಂಡವನ್ನು 11-0 ಗೋಲಿನಿಂದ ಸುಲಭವಾಗಿ ಮಣಿಸಿ ಪಾರಮ್ಯ ಮರೆದಿತ್ತು.
ಉಳಿದಂತೆ, ಪಂಜಾಬ್, ಮಣಿಪುರ, ಮಧ್ಯಪ್ರದೇಶ, ಚಂಡೀಗಡ, ಕೇರಳ, ಜಾರ್ಖಂಡ್, ಒಡಿಶಾ ರಾಜ್ಯಗಳ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಪಂದ್ಯಾವಳಿಯಲ್ಲಿ ಒಟ್ಟು 27 ತಂಡಗಳು ಭಾಗವಹಿಸಿವೆ. ಕ್ವಾರ್ಟರ್ಫೈನಲ್ ಪಂದ್ಯಗಳು ಶನಿವಾರ ಸೋಮವಾರಪೇಟೆಯ ನೂತನ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿವೆ.
ಮಡಿಕೇರಿಯ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಕಿ ಮೈದಾನದಲ್ಲಿ ಶುಕ್ರವಾರ ನಡೆದ 67ನೇ ರಾಷ್ಟ್ರಮಟ್ಟದ ಬಾಲಕಿಯರ (ಶಾಲೆಗಳ) ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ಹಾಗೂ ಕೆವಿಎಸ್ (ಕೇಂದ್ರೀಯ ವಿದ್ಯಾಲಯ ಸಂಘಟನೆ) ತಂಡಗಳು ಗೆಲುವಿಗಾಗಿ ಸೆಣಸಾಡಿದವು.